ಭಾರತಕ್ಕೆ ಅಮೆರಿಕದಿಂದ ಮೊದಲ ಹಂತದ ವೈದ್ಯಕೀಯ ವಸ್ತುಗಳು ಆಗಮನ…

173
firstsuddi

ನವದೆಹಲಿ : ಕೊರೊನಾ ವಿರುದ್ದ ಹೋರಾಡುತ್ತಿರುವ ಭಾರತಕ್ಕೆ ಅಮೆರಿಕ ಸೇರಿದಂತೆ ವಿಶ್ವದ ನಾನಾ ದೇಶಗಳು ಸಹಾಯಕ್ಕೆ ಮುಂದು ಬಂದಿದ್ದು, ಇದೀಗ ಕೊರೊನಾ ತುರ್ತು ಸಹಾಯಕ್ಕಾಗಿ ಅಮೆರಿಕ ಮೊದಲ ಹಂತದಲ್ಲಿ ವಿವಿಧ ಅಗತ್ಯ ವೈದ್ಯಕೀಯ ವಸ್ತುಗಳನ್ನು ಪೂರೈಸಿದೆ. ಟ್ರಾವಿಸ್‌ ವಾಯುನೆಲೆಯಿಂದ ಪ್ರಯಾಣ ಆರಂಭಿಸಿದ್ದ ವಿಶ್ವದ ಬೃಹತ್‌ ಯುದ್ಧವಿಮಾನವು 100 ಮಿಲಿಯನ್ ಡಾಲರ್ ಗೂ ಅಧಿಕ ಮೌಲ್ಯದ ವೈದ್ಯಕೀಯ ವಸ್ತುಗಳನ್ನು ಹೊತ್ತು ಇಂದು ಬೆಳಿಗ್ಗೆ ಭಾರತಕ್ಕೆ ಬಂದಿಳಿದಿದೆ. 400ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್ ಗಳು, 1 ಮಿಲಿಯನ್ ಗೂ ಅಧಿಕ ಕೊರೊನಾ ವೈರಸ್ ರ್ಯಾಪಿಡ್ ಟೆಸ್ಟ್ ಕಿಟ್ ಗಳು, ಇತರೆ ಆಸ್ಪತ್ರೆ ಪರಿಕರಗಳು ಸೇರಿದಂತೆ ವಿವಿಧ ವಸ್ತುಗಳನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಯುಎಸ್ ಎಂಬಸಿ, ಕೊರೊನಾ ತುರ್ತು ಪರಿಹಾರಕ್ಕಾಗಿ ಮೊದಲ ಹಂತದಲ್ಲಿ ವಿವಿಧ ಪರಿಕರಗಳನ್ನು ಹೊತ್ತ ಮೊದಲ ವಿಮಾನ ಭಾರತಕ್ಕೆ ಬಂದಿದೆ. 70 ವರ್ಷಗಳ ಸಹಕಾರವನ್ನು ಮುಂದುವರಿಸಿದ್ದೇವೆ. ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಒಟ್ಟಿಗೆ ಹೋರಾಡುತ್ತೇವೆ. ಅಮೆರಿಕ ಭಾರತದ ಜೊತೆ ಇರಲಿದೆ. ಎಂದು ತಿಳಿಸಿದೆ.

ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದ ಅಮೆರಿಕ ಅಧ್ಯಕ್ಷ ಬೈಡೆನ್ ಅವರು, ಸಾಂಕ್ರಾಮಿಕ ರೋಗದ ಆರಂಭದಲ್ಲಿ ನಮ್ಮ ಆಸ್ಪತ್ರೆಗಳಲ್ಲಿ ತೊಂದರೆಯಾಗಿದ್ದಾಗ ಅಮೆರಿಕಕ್ಕೆ ಭಾರತ ಸಹಾಯ ಮಾಡಿದಂತೆ, ಅಗತ್ಯ ಸಮಯದಲ್ಲಿ ಭಾರತಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ನಿರಂತರ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದರು.