ಚಿಕ್ಕಮಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪತ್ರ ಚಳುವಳಿ…

84
firstsuddi

ಚಿಕ್ಕಮಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಇಂದು ನಗರದಲ್ಲಿ ಪತ್ರ ಚಳುವಳಿ ಆರಂಭಿಸಿತು.

ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಬೆಳಿಗ್ಗೆ ಪ್ರಧಾನ ಅಂಚೆ ಕಛೇರಿ ಬಳಿ ಜಮಾಯಿಸಿದ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಛೇರಿಯಿಂದ ಅಂಚೆ ಕಾರ್ಡ್‍ಗಳನ್ನು ಪಡೆದು ಅದರಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಇಳಿಸಿ, ಬಡವರನ್ನು ರಕ್ಷಿಸಿ ಎಂದು ಬರೆದು ಪ್ರಧಾನ ಮಂತ್ರಿಗಳಿಗೆ ರವಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100ರ ಗಡಿದಾಟಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ 2014 ರಿಂದ ಇದುವರೆಗೆ 300 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತು ಇಳಿಕೆ ಮಾಡಿದೆ ಎಂದು ಆರೋಪಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಅಗತ್ಯ ವಸ್ತುಗಳನ್ನು ಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.
ದೇಶದ ಜನತೆಯ ವಿರೋಧದ ನಡುವೆಯೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆ ವಸ್ತುಗಳು ಮತ್ತು ರಸಗೊಬ್ಬರದ ಬೆಲೆ ದಿನೇ ದಿನೇ ಏರುತ್ತಿರುವುದು ಪ್ರಧಾನ ಮಂತ್ರಿಗಳ ಅಚ್ಚೇ ದಿನ್ ಆಯೇಗಾ ಭರವಸೆಯನ್ನು ಹುಸಿಯಾಗಿಸಿದೆ ಎಂದು ದೂರಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಪತ್ರ ಚಳುವಳಿಯನ್ನು ಇಂದಿನಿಂದ ಆರಂಭಿಸಿದ್ದು ನಾಳೆಯಿಂದ ಪ್ರತಿದಿನ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಬೆಲೆ ಇಳಿಕೆಗೆ ಒತ್ತಾಯಿಸಿ ಪ್ರಧಾನ ಮಂತ್ರಿಗಳಿಗೆ ಪತ್ರವನ್ನು ರವಾನಿಸಲಿದ್ದಾರೆ ಎಂದು ತಿಳಿಸಿದರು.
ಬಡವರು ಮತ್ತು ಮಧ್ಯಮವರ್ಗದವರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೂಡಲೇ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ ಸಂದೀಪ್ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ಇಳಿಸಿ ಅಥವಾ ಅಧಿಕಾರ ತ್ಯಜಿಸಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ|| ಡಿ.ಎಲ್.ವಿಜಯಕುಮಾರ್ ಮಾತನಾಡಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ನಿಯಂತ್ರಣದಲ್ಲಿಟ್ಟಿತ್ತು. ಇಂದಿನ ಬೆಲೆಯ ಅರ್ಧದಷ್ಟು ಬೆಲೆಗೆ ಆಗ ಪೆಟ್ರೋಲ್, ಡೀಸೆಲ್ ದೊರೆಯತ್ತಿತ್ತು ಎಂದರು.

ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ದುಪ್ಪಟ್ಟು ಮಾಡಿದೆ ಎಂದು ಆರೋಪಿಸಿದ ಅವರು ಬೆಲೆ 100ರ ಗಡಿದಾಟಿದ್ದರೂ ಬಿಜೆಪಿಯವರು ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಹಮದ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ಪಕ್ಷದ ಮುಖಂಡರಾದ ತನೋಜ್, ಜೆ.ವಿನಾಯಕ, ರಸೂಲ್‍ಖಾನ್, ಜಗದೀಶ್, ಲಾಕೇಶ್, ರೂಬೆನ್ ಮೋಸಸ್, ಸಿಲ್ವಸ್ಟರ್, ಸುದೀಪ್, ಸುರೇಶ್ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.