ಚಿಕ್ಕಮಗಳೂರು : ಇಂಧನ ಬೆಲೆ ಏರಿಕೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ನಿಂದ ಪ್ರತಿಭಟನೆ…

95
firstsuddi

ಚಿಕ್ಕಮಗಳೂರು : ಇಂಧನ ಬೆಲೆ ಏರಿಕೆ ವಿರೋಧಿಸಿ ತಾಲ್ಲೂಕಿನ ಆಲ್ದೂರಿನಲ್ಲಿ ಕಿಸಾನ್ ಕಾಂಗ್ರೆಸ್ ಮತ್ತು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ಪಟ್ಟಣದ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಉದ್ಯಮಿಗಳನ್ನು ಶ್ರೀಮಂತರನ್ನಾಗಿಸುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರು ಜೀವನ ನಿರ್ವಹಣೆ ಮಾಡದಂತಹ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಆರೋಪಿಸಿದರು.

ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಅಲ್ಪಸ್ವಲ್ಪ ಬೆಲೆ ಹೆಚ್ಚಳವಾದಾಗ ಬೀದಿಗಿಳಿದು ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿ ನಾಯಕರು ಇದೀಗ ಅವರದೇ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ 100 ರ ಗಡಿದಾಟಿದ್ದರೂ ಬಾಯಿಮುಚ್ಚಿಕೊಂಡಿರುವುದಕ್ಕೆ ಕಾರಣವನ್ನು ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಆಕಾಶಕ್ಕೇರು ತ್ತಿದ್ದರೂ ತಾವು ಜನರ ಪರ ಏಕೆ ನಿಲ್ಲುತ್ತಿಲ್ಲ ಎಂಬುದಕ್ಕೆ ಬಿಜೆಪಿ ಶಾಸಕರು ಮತ್ತು ಸಂಸದರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಡಿ.ಎಂ.ವಿಜಯ್ ಮಾತನಾಡಿ ಸ್ವಾತಂತ್ರ್ಯಾ ನಂತರ ದೇಶ ಕಂಡ ಅತ್ಯಂತ ಕೆಟ್ಟ ಸರ್ಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ. ಇಂತಹ ಕೆಟ್ಟ ಪ್ರಧಾನಿಯನ್ನು ರಾಷ್ಟ್ರದ ಜನತೆ ಇದುವರೆಗೂ ಕಂಡಿರಲಿಲ್ಲ ಎಂದು ಹೇಳಿದರು.

ದಿನಬಳಕೆ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮೂಲಕ ಬಡವರು ಮತ್ತು ಮಧ್ಯಮ ವರ್ಗದವರನ್ನು ಬದುಕದಂತೆ ಮಾಡಿರುವ ಬಿಜೆಪಿಯನ್ನು ಜನ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಹಳ್ಳಿ ಪ್ರಕಾಶ್ ಮಾತನಾಡಿ ಕೇಂದ್ರ ಸರ್ಕಾರಕ್ಕೆ ಬಡವರು ಮತ್ತು ಮಧ್ಯಮ ವರ್ಗದವರನ್ನು ಉಳಿಸುವ ಮನಸ್ಸಿದ್ದರೆ ಕೂಡಲೇ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಾಬಿರ್, ಕಾಂಗ್ರೆಸ್ ಎಸ್ಸಿಎಸ್ಟಿ ವಿಭಾಗದ ಅಧ್ಯಕ್ಷ ಹೂವಪ್ಪ, ಹೋಬಳಿ ಅಧ್ಯಕ್ಷ ಸಿ.ಸಿ.ಈರೇಗೌಡ, ಯುವಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆದಿತ್ಯ, ಗ್ರಾ.ಪಂ. ಸದಸ್ಯ ಅಶೋಕ್, ರಸೂಲ್‍ಖಾನ್, ಸುರೇಶ್, ಪೂರ್ಣೇಶ್, ಸಿದ್ದಾಂತ್, ವಿಜಯ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.