ಶಿವಮೊಗ್ಗ : ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಮುಖ್ಯಮಂತ್ರಿ ಖುರ್ಚಿ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಗೆದ್ದು ಬರಬೇಕು. ನಂತರ ಬಹುಮತ ಬರಬೇಕು, ಆಮೇಲೆ ಶಾಸಕರು ಸೇರಿ ತೀರ್ಮಾನ ಮಾಡಬೇಕು. ನಂತರ ಕೇಂದ್ರದ ನಾಯಕರು ಒಪ್ಪಬೇಕು. ಹೀಗಿರುವಾಗ, ಕಾಂಗ್ರೆಸ್ ನವರು ಕತ್ತಲ ಕೋಣೆಯಲ್ಲಿ ಇಲ್ಲದ ಕರಿ ಬೆಕ್ಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಮುಂದೆಯೂ ಬಿಜೆಪಿಯೇ ಆಡಳಿತಕ್ಕೆ ಬರುತ್ತೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಅವರ ಜೇಬಿನಲ್ಲಿ ಇದೆಯಾ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರಿಗೆ ಕೇಳಿದ್ರೆ, ತಾನು ಯಾರಿಗೂ ನನ್ನ ಬಗ್ಗೆ ಹೇಳಿ ಎಂದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಈ ಬಗ್ಗೆ ಮಾತನಾಡಿದರೆ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಕಠಿಣ ನಿಲುವು ತೆಗೆದುಕೊಳ್ಳಲಿ ನೋಡೋಣ ಎಂದು ಎಂದು ಈಶ್ವರಪ್ಪನವರು ಸವಾಲು ಹಾಕಿದರು.
ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿ, ಉಪಚುನಾವಣೆ ಹಾಗೂ ಚುನಾವಣೆ ಸಂದರ್ಭದಲ್ಲಿ ಬುದ್ಧಿ ಕಲಿಸಿದ್ದಾರೆ. ಆದರೂ ಇವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷಕ್ಕೂ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವುದು ಹಾಸ್ಯಾಸ್ಪದ ಎಂದರು.










