ಬೆಂಗಳೂರು : ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಮುಂದೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಏಕಾಂಗಿ ಧರಣಿ ನಡೆಸಿದ್ದಾರೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ, ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿ ಶಾಸಕರು ಧರಣಿ ನಡೆಸಿದ್ದು, ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಯಾಕೋ ಬೆಲೆ ಸಿಗ್ತಿಲ್ಲ. ಮೀಸಲು ಕ್ಷೇತ್ರ ಅನ್ನೋ ಕಾರಣಕ್ಕೋ ಯಾಕೋ ಕಡೆಗಣಿಸ್ತಿದ್ದಾರೆ. ಎಲ್ಲಾ ಉಸ್ತುವಾರಿ ಸಚಿವರು ಬರ್ತಾರೆ ಏನೂ ಮಾಡಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದ್ರೆ ಅರ್ಥ ಆಗಲ್ಲ. ಅದಕ್ಕಾಗಿ ಧರಣಿ ಕೂತಿದ್ದೇನೆ ಎಂದು ಶಾಸಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿ ಮೂಡಿಗೆರೆ ಕ್ಷೇತ್ರ ಕೈಬಿಡಲಾಗಿದೆ. ಎನ್ ಡಿಆರ್ ಎಫ್ ಪಟ್ಟಿಯಲ್ಲಿ ಮೂಡಿಗೆರೆ ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಹಾರ ಕೊಡಲೇಬೇಕು. 2019ರಲ್ಲಿ ಅತಿವೃಷ್ಟಿ ಆಗಿತ್ತು. 6 ಜನ ಮನೆ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಮನೆಗಳು, ಕಾಫಿ ತೋಟ ಕೊಚ್ಚಿಕೊಂಡು ಹೋಗಿದ್ದವು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು. ನಮ್ಮ ಸರ್ಕಾರವೇ ಈ ತರ ತಾರತಮ್ಯ ಮಾಡಬಾರದು. ಆದಷ್ಟು ಬೇಗ ಸಾಮಾನ್ಯ ಕ್ಷೇತ್ರ ಆಗಲಿ ಅಂತ ಅನಿಸ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.
ಕಂದಾಯ ಸಚಿವ ಆರ್. ಅಶೋಕ್ ಅವರ ಆಪ್ತ ಸಹಾಯಕನ ಮೂಲಕ ಫೋನ್ ನಲ್ಲಿ ಪ್ರತಿಕ್ರಿಯಿಸಿದರು. ಆಗ ಶಾಸಕ ಕುಮಾರಸ್ವಾಮಿ ಸಚಿವರನ್ನೇ ಇಲ್ಲಿಗೆ ಬರಲು ಹೇಳಿ, ನಾವೇನು ಲೂಟಿ ಮಾಡಲು ಬಂದಿಲ್ಲ ಎಂದರು. ಬಳಿಕ ಖುದ್ದು ಸಚಿವ ಆರ್. ಅಶೋಕ್ ಅವರೇ ಶಾಸಕ ಕುಮಾರಸ್ವಾಮಿ ಧರಣಿ ಕುಳಿತಿದ್ದ ಸ್ಥಳಕ್ಕೆ ದೌಡಾಯಿಸಿದರು. ಮನವೊಲಿಕೆಗೆ ಗಾಂಧಿ ಪ್ರತಿಮೆ ಬಳಿಯೇ ಬಂದ ಆರ್ ಅಶೋಕ್ ಅವರನ್ನು ಕಾಣುತ್ತಿದ್ದಂತೆ ಎಂ.ಪಿ ಕುಮಾರಸ್ವಾಮಿ ಕಣ್ಣೀರು ಹಾಕಿದರು.
ಈ ವೇಳೆ ಅವರ ಹೆಗಲ ಮೇಲೆ ಕೈ ಹಾಕಿ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿ ಕುಮಾರಸ್ವಾಮಿ ಮನವೊಲಿಸಿ ಆರ್. ಅಶೋಕ್ ಧರಣಿಯನ್ನು ಅಂತ್ಯಗೊಳಿಸಿದ್ದಾರೆ. ಅನುದಾನ ಸಮಸ್ಯೆ ಆಗಿದೆ. ಸಿಎಂ ಬಳಿ ಮಾತನಾಡಿ ಬೆಳೆ ಪರಿಹಾರ ಕೊಡಬೇಕಾಗಿದ್ದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.










