ದೇಶದ ವಿರುದ್ಧ ಚಟುವಟಿಕೆ ನಡೆಸುವವರ ಮೇಲೆ ನಿಗಾ : ಸಿಎಂ ಬೊಮ್ಮಾಯಿ.

84
firstsuddi

ಹುಬ್ಬಳ್ಳಿ : ಶಿಗ್ಗಾವಿ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ತೆರಳುವ ಮುನ್ನ ನಗರದ ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ದೇಶದ ವಿರುದ್ಧ ಚಟುವಟಿಕೆ ನಡೆಸುವವರ ಮೇಲೆ ಪೊಲೀಸ್ ಇಲಾಖೆ ನಿಗಾಯಿಟ್ಟಿದೆ. ಉಗ್ರರ ಜೊತೆ ಕೈ ಜೋಡಿಸಿ, ಸಹಾಯಕರಾಗಿ ಕೆಲಸ ಮಾಡುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಎನ್ ಐಎ ಕೆಲವರನ್ನು ತೆಗೆದುಕೊಂಡಿದೆ. ಎನ್ ಐಎ ಜೊತೆ ನಮ್ಮ ಪೊಲೀಸರು ಕೂಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೇರಿದಂತೆ ಹಲವಾರು ಕೇಂದ್ರ ಸಚಿವರು ನಗರಕ್ಕೆ ಆಗಮಿಸುತ್ತಿದ್ದಾರೆ. ಬಳಿಕ ದಾವಣಗೆರೆಗೆ ಶಾ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಜೊತೆ ರಾಜ್ಯದ ಹಲವಾರು ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಸಿಎಂ ತಿಳಿಸಿದರು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಸೆಪ್ಟಂಬರ್ 5ರಂದು ತೀರ್ಮಾನ ತೆಗೆದುಕೊಳ್ಳಲಾಗುವುದು. ಜಿಲ್ಲಾವಾರು ಕೋವಿಡ್ ಪರಿಸ್ಥಿತಿ ನೋಡಿಕೊಂಡು ತಜ್ಞರಿಗೆ ವರದಿ ನೀಡಲು ಕೇಳಿದ್ದೇವೆ. ಹೀಗಾಗಿ ಅದನ್ನು ನೋಡಿಕೊಂಡು ತೀರ್ಮಾನವನ್ನು ತೆಗೆದುಕೊಳ್ಳಲಾಗುವುದೆಂದು ಹೇಳಿದರು.