ಚಿಕ್ಕಮಗಳೂರು : ವರ್ತುಲ ರಸ್ತೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ನಗರಾಭಿವೃದ್ದಿ ಪ್ರಾಧಿಕಾರ ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಮುಂದಾದಲ್ಲಿ ಸಿಡಿಎ ಕಛೇರಿ ಎದುರು ಅನಿರ್ದಿಷ್ಟಕಾಲ ಧರಣಿ ನಡೆಸುವ ನಿರ್ಣಯವನ್ನು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಿನ್ನೆ ನಡೆದ ರೈತರ ಸಭೆ ಕೈಗೊಂಡಿದೆ.
ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬಹುತೇಕ ರೈತರು ವರ್ತುಲ ರಸ್ತೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ಬಡ ರೈತರ ಭೂಮಿಯನ್ನು ವಶಪಡಿಸಿ ಕೊಳ್ಳಲು ಮುಂದಾಗಿರುವ ನಗರಾಭಿವೃಧ್ದಿ ಪ್ರಾಧಿಕಾರದ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿ ಸಿದರು.
ರೈತರ ಜಮೀನನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಮುಂದಾದಲ್ಲಿ ರೈತರು ತಮ್ಮ ಕುಟುಂಬದೊಂದಿಗೆ ನಗರಾಭಿವೃದ್ದಿ ಪ್ರಾಧಿಕಾರದ ಕಛೇರಿ ಎದುರು ಅನಿರ್ದಿಷ್ಟಕಾಲ ಧರಣಿ ನಡೆಸುವುದರ ಜೊತೆಗೆ ಹೋರಾಟದ ಸ್ವರೂಪವನ್ನು ತೀವ್ರಗೊಳಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ವೇಳೆ ಮಾತನಾಡಿದ ರೈತರು ತಮ್ಮ ಜಮೀನನ್ನು ಯಾವುದೇ ಕಾರಣಕ್ಕೂ ಪ್ರಾಧಿಕಾರಕ್ಕೆ ನೀಡುವುದಿಲ್ಲ ಎಂದು ಘೋಷಿಸಿದರು. ಸಿಡಿಎ ಅಧ್ಯಕ್ಷ ಮತ್ತು ಆಯುಕ್ತರು ರೈತರು ಸ್ವಂತ ಇಚ್ಚೆಯಿಂದ ಭೂಮಿಯನ್ನು ನೀಡಿದಲ್ಲಿ ಮಾತ್ರ ಪಡೆದುಕೊಳ್ಳುವುದಾಗಿ ಪತ್ರಿಕಾ ಹೇಳಿಕೆ ನೀಡಿ ಇನ್ನೊಂದೆಡೆ ಕೆಲವು ರೈತರು ಖುದ್ದಾಗಿ ಭೂಮಿ ನೀಡಲು ಮುಂದೆ ಬಂದಿದ್ದಾರೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಹೇಳಿದರು.
ಇದುವರೆಗೂ ಯಾವುದೇ ರೈತರು ತಮ್ಮ ಭೂಮಿಯನ್ನು ಪ್ರಾಧಿಕಾರಕ್ಕೆ ನೀಡಲು ಮುಂದಾಗಿಲ್ಲ. ಅತ್ಯಂತ ಫಲವತ್ತಾದ ಭೂಮಿಯಲ್ಲಿ ತೆಂಗು, ಅಡಿಕೆ, ತರಕಾರಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಬದುಕಿಗೆ ಆಧಾರವಾಗಿರುವ ಭೂಮಿಯನ್ನು ನೀಡಲು ರೈತರು ಸಿದ್ಧವಿಲ್ಲ ಎಂದು ತಿಳಿಸಿದರು.
ವರ್ತುಲ ರಸ್ತೆ ಮತ್ತು ಬಡಾವಣೆ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿರುವ ಪ್ರಾಧಿಕಾರದ ನಿರ್ಧಾರದ ಹಿಂದೆ ಬಂಡವಾಳ ಶಾಹಿಗಳ ಹಿತಾಸಕ್ತಿ ಅಡಗಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೈತರ ಜಮೀನನ್ನು ಕಬಳಿಸಲು ಸಿಡಿಎ ಮೂಲಕ ಪ್ರಯತ್ನಿಸುತ್ತಿದ್ದು ಅದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಶಾಸಕ ಸಿ.ಟಿ.ರವಿ ಅವರನ್ನು ರೈತರು ನೇರವಾಗಿ ಬೇಟಿಯಾಗಿ ತಮ್ಮ ಬದುಕಿಗೆ ಮಾರಕವಾಗಿರುವ ಈ ಯೋಜನೆಯನ್ನು ಕೈಬಿಡುವಂತೆ ಮನವಿ ಸಲ್ಲಿಸಿದ್ದರೂ ಅವರು ರೈತರ ಪರವಾಗಿ ನಿಲ್ಲದೇ ಯೋಜನೆಗೆ ಬೆಂಬಲ ವ್ಯಕ್ತಪಡಿಸಿರುವುದು ಅವರ ರೈತಪರ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.
ರೈತ ಸಂಘದ ಮುಖಂಡ ಗುರುಶಾಂತಪ್ಪ, ಜಿಲ್ಲಾಧ್ಯಕ್ಷ ಬಸವರಾಜ್, ಹಿರೇಮಗಳೂರಿನ ರೈತರಾದ ಲೋಕೇಶ್, ಹೆಚ್.ಎನ್.ಸುರೇಶ್, ಹೆಚ್.ಡಿ.ರಾಜಣ್ಣ, ಉಮೇಶ್, ಚಂದ್ರಶೇಖರ್, ಲಕ್ಷ್ಮೀಪುರದ ಚಂದ್ರೇಗೌಡ, ಕನ್ನೇನಹಳ್ಳಿಯ ಮಹೇಶಪ್ಪ, ಹರೀಶ್, ಕಲ್ಲೇಶ್, ಮಲ್ಲೇದೇವರಹಳ್ಳಿಯ ಕುಮಾರ್, ಬಂಡಿಹಳ್ಳಿಯ ಪ್ರಕಾಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.










