ಮೈಸೂರು : ಶಾಸಕ ಸಾ.ರಾ. ಮಹೇಶ್ ವಿರುದ್ಧ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಡಿದ್ದ ಭೂ ಅಕ್ರಮ ಆರೋಪಗಳಿಗೆ ಮರುಜೀವ ಸಿಕ್ಕಿದ್ದು, ಸಾ.ರಾ.ಮಹೇಶ್ ಒಡೆತನದ ಜಾಗದ ಪುನರ್ ಸರ್ವೇ ನಡೆಸಲು ಭೂ ದಾಖಲೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸಾ.ರಾ.ಮಹೇಶ್ ಒಡೆತನದ ಜಾಗದ ಸರ್ವೇ ನಡೆಸಿ ಒತ್ತುವರಿ ಆಗಿಲ್ಲ ಎಂದು ಪ್ರಾದೇಶಿಕ ಆಯುಕ್ತರು ವರದಿ ಕೊಟ್ಟಿದ್ದರಾದರೂ ಈಗ ಮತ್ತೊಮ್ಮೆ ಸರ್ವೇ ನಡೆಯಲಿದೆ. ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಈ ಸರ್ವೇ ಕಾರ್ಯ ನಡೆಯಲಿದೆ. ಭೂದಾಖಲೆಗಳ ಉಪ ನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ. ಲೋಹಿತ್ ಅವರನ್ನು ಮರು ತನಿಖೆ ಮಾಡಲು ನೇಮಕ ಮಾಡಲಾಗಿದ್ದು, 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಜೊತೆಗೆ ಶಾಸಕ ಸಾ.ರಾ. ಮಹೇಶ್ ಗೆ ನೀಡಿರುವ ಕ್ಲೀನ್ ಚೀಟ್ ಗೆ ಬ್ರೇಕ್ ಹಾಕಲು ಸರ್ವೇ ಇಲಾಖೆ ಆಯುಕ್ತರು ಮುಂದಾಗಿದ್ದಾರೆ ಎನ್ನಲಾಗ್ತಿದೆ.
ದಟ್ಟಗಳ್ಳಿ, ಆರ್.ಟಿ. ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಎಲ್ಲಾ ಆರೋಪಗಳ ಬಗ್ಗೆಯೂ ಸರ್ವೇ ಮಾಡುವಂತೆ ಸೂಚನೆ ನೀಡಲಾಗಿದೆ.










