ಬೆಂಗಳೂರು : ಮಹಿಳಾ ಟೆಕ್ಕಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿರುವ ಆರೋಪದ ಮೇರೆಗೆ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಆ್ಯಂಟೋನಿ (35) ಮತ್ತು ಒಬಾಕಾ (36) ಬಂಧಿತ ಆರೋಪಿಗಳು. ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿರುವ 29 ವರ್ಷದ ಸಂತ್ರಸ್ತ ಯುವತಿಗೆ ಆರೋಪಿ ಆ್ಯಂಟೋನಿ ಹಲವು ವರ್ಷಗಳಿಂದ ಪರಿಚಯವಿದ್ದ. ಆ.29ರಂದು ಆ್ಯಂಟೋನಿ ಯುವತಿಯನ್ನು ಸ್ನೇಹಿತರ ಮನೆಗೆ ಹೋಗೋಣ ಎಂದು ಒಬಾಕಾ ಮನೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಮೂವರೂ ಜೊತೆಗೆ ಕುಳಿತು ಮದ್ಯ ಸೇವಿಸಿದ್ದರು.
ಕುಡಿದ ಮತ್ತಿನಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದರು. ಯುವತಿಯ ದೂರಿನ ಮೇರೆಗೆ ಇಬ್ಬರನ್ನೂ ಬಂಧಿಸಲಾಗಿದೆ.










