ಕೊಟ್ಟಿಗೆಹಾರ : ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ಬಾನಹಳ್ಳಿಯ ನಿವೇಶನ ರಹಿತ ಹೋರಾಟ ಸಮಿತಿಯ ವತಿಯಿಂದ ಶಾಸಕರಾದ ಎಂ.ಪಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೇಶನ ರಹಿತ ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಸ್ ವಿಜಯ್, ಈ ಭಾಗದಲ್ಲಿ ನಿರಾಶ್ರಿತ ಕುಟುಂಬಗಳು ಹೆಚ್ಚಿದ್ದು ಹೆಚ್ಚಿನವರು ಕೂಲಿ ಕಾರ್ಮಿಕರಿದ್ದಾರೆ. ಹಲವು ವರ್ಷಗಳಿಂದ ಗ್ರಾ.ಪಂ ಗೆ ಮನವಿ ಸಲ್ಲಿಸಿದ್ದು 2016 ರಲ್ಲಿ ನಿವೇಶನ ಕಾಯ್ದಿರಿಸಲಾಗಿದೆ. ಆದರೆ ನಿವೇಶನ ಹಂಚಿಕೆಯಾಗಿಲ್ಲ. ಫಲ್ಗುಣಿ ಗ್ರಾಮದ ಸರ್ವೆ ನಂ 249 ರಲ್ಲಿ 5 ಎಕರೆ ಸರ್ಕಾರಿ ಜಮೀನು ಇದ್ದು ನಿವೇಶನ ರಹಿತರಿಗೆ ನಿವೇಶನ ನೀಡಬೇಕಿದೆ ಎಂದರು.
ಮನವಿ ಸ್ವೀಕರಿಸಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಸ್ಥಳದಲ್ಲೆ ತಹಶೀಲ್ದಾರ್ ಹಾಗೂ ರಾಜಸ್ವ ನಿರೀಕ್ಷಕರಿಗೆ, ಗ್ರಾ.ಪಂ ಅಧ್ಯಕ್ಷರಿಗೆ ಕರೆ ಮಾಡಿ ಈ ಬಗ್ಗೆ ಕ್ರಮ ಕಯಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಕೋಮಲಶಿವಣ್ಣ, ನಿವೇಶನ ರಹಿತ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ ರವಿ, ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಸುನೀಲ್, ಸದಸ್ಯರಾದ ಮೇಘರಾಜ್, ಗಣೇಶ್, ಸುರೇಶ್, ಸಾತ್ವಿಕ್, ಯೋಗೇಶ್, ನಂದೀಶ್, ಸುಮಂತ್, ಶಶಿ, ಹಾಗೂ ಸರ್ವ ಸದಸ್ಯರು ಇದ್ದರು.










