ಏನಿದು ನಿಫಾ ವೈರಸ್..? ಹೇಗೆ ಹರಡುತ್ತೆ, ರೋಗ ಲಕ್ಷಣಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

85
firstsuddi

ನವದೆಹಲಿ : ನಿಫಾ, ಕೊರೊನಾ ಆರ್ಭಟದ ಬೆನ್ನಲ್ಲೇ ಕಾಣಿಸಿಕೊಂಡ ಮತ್ತೊಂದು ವೈರಸ್. 1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಫಾ ವೈರಸ್ ಎಂದು ಕರೆಯುತ್ತಾರೆ. ಕೇರಳದಲ್ಲಿ ಮೊದಲ ಬಾರಿಗೆ ಕಂಡು ಬಂದಿದ್ದು 2018ರಲ್ಲಿ, ಈಗ ಮತ್ತೊಮ್ಮೆ ಕೇರಳದ ಕೋಯಿಕ್ಕೋಡ್ ನಲ್ಲಿ ಕಾಣಿಸಿಕೊಂಡು, ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದೆ. ಹಣ್ಣು ತಿನ್ನುವ ಬಾವಲಿಗಳು ನಿಫಾ ವೈರಸ್ ನ ಮೂಲ ಮತ್ತು ಅವುಗಳೇ ನಿಫಾ ವೈರಸ್ ಹರಡಲು ಕಾರಣವೆಂದು ಈವರೆಗೂ ನಂಬಲಾಗಿದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಫಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

ನಿಫಾ ವೈರಸ್ ಹೇಗೆ ಹರಡುತ್ತದೆ..?
ಬಾವಲಿಗಳಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅಲ್ಲದೆ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ). ಪ್ರಾಣಿಗಳಿಂದ ಮನುಷ್ಯರಿಗೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ.

ನಿಫಾ ವೈರಸ್ ಲಕ್ಷಣಗಳೇನು?
ನಿಫಾ ವೈರಸ್ ಗೆ ವ್ಯಕ್ತಿಯೊಬ್ಬ ತುತ್ತಾದರೆ, ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಕಾಣಿಸಿಕೊಳ್ಳುತ್ತದೆ,
ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ, ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ, ಬಳಿಕ ಪ್ರಜ್ಞಾಹೀನರಾಗುತ್ತಾರೆ, ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ. ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು.

ನಿಯಂತ್ರಣ ಹೇಗೆ?
ಕೊರೊನಾದಂತೆಯೇ ಅತ್ಯಂತ ವೇಗವಾಗಿ ಹರಡುವ ಗುಣವನ್ನು ನಿಫಾ ಹೊಂದಿದೆ. ಹಾಗಾಗಿ ರೋಗ ತಡೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಬಾವಲಿಗಳು ಹೆಚ್ಚಿರುವ ಜಾಗದಲ್ಲಿ ಹಣ್ಣು ತಿನ್ನುವಾಗ ಎಚ್ಚರವಿರಬೇಕಾದ ಅಗತ್ಯವಿದೆ. ಹಣ್ಣುಗಳು ಮಾತ್ರವಲ್ಲದೇ ತರಕಾರಿಗಳನ್ನು ತಿನ್ನುವಾಗಲೂ ಸರಿಯಾಗಿ ತೊಳೆದು ತಿನ್ನಬೇಕು. ಕೋವಿಡ್ ನಿಯಂತ್ರಣಕ್ಕೆ ಪಾಲನೆ ಮಾಡುವ ಮಾರ್ಗಸೂಚಿಗಳನ್ನೇ ನಿಫಾ ನಿಯಂತ್ರಣಕ್ಕೂ ಪಾಲಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನೈರ್ಮಲ್ಯ ಬಹಳ ಮುಖ್ಯ. ರೋಗಿಯಿಂದ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು. ರೋಗಿಯು ಬಳಸಿದ ವಸ್ತುಗಳನ್ನು ಸೋಂಕು ರಹಿತಗೊಳಿಸಬೇಕು ಮತ್ತು ಪ್ರತ್ಯೇಕವಾಗಿ ಇಡಬೇಕು. ಆಗ ಮಾತ್ರ ನಿಫಾ ನಿಯಂತ್ರಣ ಸಾಧ್ಯ..

ಕೋವಿಡ್ ಮಾದರಿಯ ಟೆಸ್ಟೇ ಇಲ್ಲೂ ಇರುತ್ತೆ:

ಸದ್ಯಕ್ಕೆ ನಿಫಾ ವೈರಸ್ ಅನ್ನು ಆರ್ಟಿಪಿಸಿಆರ್ ಮಾದರಿಯಲ್ಲೇ ಪರೀಕ್ಷೆ ಮಾಡಲಾಗುತ್ತದೆ. ಗಂಟಲು ದ್ರವವನ್ನು ಸಂಗ್ರಹಿಸಿ, ಅವುಗಳನ್ನ ಪರೀಕ್ಷೆಗೆ ಕಳುಹಿಸಲಾಗುತ್ತದೆ.

ಕೇರಳದಲ್ಲಿ ಈಗಿನ ನಿಫಾ ವರದಿ:

ಕೇರಳದಲ್ಲಿ 11 ಜನರಲ್ಲಿ ನಿಫಾ ರೋಗ ಲಕ್ಷಣ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ 12 ವರ್ಷದ ಬಾಲಕ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಈ ಜಿಲ್ಲೆಯ ಗಡಿಯಲ್ಲಿರುವ ವಯನಾಡು, ಕಣ್ಣೂರು, ಮಲಪ್ಪುರಂ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಕರ್ನಾಟಕದ ಗಡಿಗೆ ಹೊಂದಿಕೊಂಡಿರೋ ಎರಡು ಜಿಲ್ಲೆ ಸೇರಿ 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಗೆ  ಕೇಂದ್ರ ಸೂಚನೆ ನೀಡಿದೆ.{ವಯನಾಡು (ಚಾಮರಾಜನಗರ, ಮೈಸೂರು) ಹಾಗೂ ಕಣ್ಣೂರು (ಕೊಡಗು) ಜಿಲ್ಲೆಗೆ ಹೊಂದಿಕೊಂಡಿವೆ}.