ಮೈಸೂರು : ಈ ಬಾರಿ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಆ ಪೈಕಿ ಮೊಟ್ಟ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಹೆಜ್ಜೆ ಹಾಕಲು ಸಿದ್ಧನಾಗಿರುವ ಅಶ್ವತ್ಥಾಮ ಆನೆ ಎಲ್ಲರ ಗಮನ ಸೆಳೆದಿದೆ.
ಈ ಅಶ್ವತ್ಥಾಮನಿಗೆ ಕಾಡಿಗಿಂತ ನಾಡೇ ಹೆಚ್ಚು ಇಷ್ಟ. ನಾಲ್ಕು ವರ್ಷಗಳ ಹಿಂದೆ ಹಾಸನ ಜಿಲ್ಲೆ ಸಕಲೇಶಪುರದ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಕಾಡಿನಿಂದ ನಾಡಿಗೆ ಬರುತ್ತಿದ್ದ ಅಶ್ವತ್ಥಾಮ ಬೆಳೆದ ಬೆಳೆಯನ್ನು ತಿಂದು ಮತ್ತೆ ಕಾಡು ಸೇರುತ್ತಿತ್ತು. ಸಹಜವಾಗಿ ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆಗ ಆರಂಭವಾಯ್ತು ಆಪರೇಷನ್ ಗಜರಾಜ. ಗ್ರಾಮಸ್ಥರು ಹೇಳಿದ ಪ್ರಕಾರ ಆನೆ ಭಾರಿ ಗಾತ್ರದ್ದಾಗಿತ್ತು. ಉದ್ದನೆಯ ದಂತ, ಅಂತಾ ಗೊತ್ತಾಗಿತ್ತು. ಆದ್ದರಿಂದ ಅರಣ್ಯ ಇಲಾಖೆಯವರು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ದರಿರಲಿಲ್ಲ. ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಆನೆ ನೇತೃತ್ವದಲ್ಲಿ ಅರ್ಜುನ ಸೇರಿ ಹಲವು ಆನೆಗಳ ಕಾರ್ಯಾಚರಣೆಯಲ್ಲಿ ಅಶ್ವತ್ಥಾಮ ಸೆರೆಯಾಗಿತ್ತು.
ಬಳಿಕ 30 ವರ್ಷದ ಗಂಡಾನೆಯನ್ನು ದೊಡ್ಡಹರವೆ ಆನೆ ಕ್ಯಾಂಪ್ ನ ಕ್ರಾಲ್ ನಲ್ಲಿಟ್ಟು ತರಬೇತಿ ನೀಡಿದ ಬಳಿಕ ‘ಅಶ್ವತ್ಥಾಮ’ ಎಂದು ಅರಣ್ಯಾಧಿಕಾರಿಗಳು ಹೆಸರಿಟ್ಟಿದ್ದರು. ಬರೋಬ್ಬರಿ 3,500ಕೆಜಿ ತೂಕವಿದ್ದ ಅಶ್ವತ್ಥಾಮ, 2.85 ಮೀಟರ್ ಎತ್ತರ, 3.46 ಮೀಟರ್ ಶಾರೀರದ ಉದ್ದ ಹೊಂದಿದ್ದಾನೆ. ತರಬೇತಿಯಿಂದ ಉಗ್ರನಾಗಿದ್ದ ಆನೆ ಸೌಮ್ಯವಾಗಿದೆ. ಅಶ್ವತ್ಥಾಮನಿಗೆ ಕೇವಲ 34 ವರ್ಷ ಜೊತೆಗೆ ಸಮತಟ್ಟಾದ ಬೆನ್ನು ಇದೆ. ಚಿನ್ನದ ಅಂಬಾರಿ ಕಟ್ಟಲು ಹೇಳಿ ಮಾಡಿಸಿದ ಮೈ ಕಟ್ಟು. ಹೀಗಾಗಿಯೇ ಅಶ್ವತ್ಥಾಮ ಭವಿಷ್ಯದ ಅಂಬಾರಿ ಹೊರುವ ಆನೆ ಎಂದೇ ಬಿಂಬಿಸಲಾಗಿದೆ.










