ಇಸ್ಲಾಮಾಬಾದ್ : ಶಾಲಾ-ಕಾಲೇಜುಗಳ ಶಿಕ್ಷಕಿಯರು ಜೀನ್ಸ್ ಪ್ಯಾಂಟ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸುವಂತಿಲ್ಲ. ಅಲ್ಲದೇ ಶಿಕ್ಷಕರು ಕೂಡ ಬಿಗಿಯಾದ ಟಿ-ಶರ್ಟ್, ಜೀನ್ಸ್ ಪ್ಯಾಂಟ್ ಗಳನ್ನು ಧರಿಸಿ ಶಾಲಾ-ಕಾಲೇಜಿಗೆ ಬರುವಂತಿಲ್ಲ ಎಂದು ಪಾಕಿಸ್ತಾನದ ಫೆಡರಲ್ ಆಪ್ ಎಜುಕೇಶನ್(ಎಫ್ ಡಿಇ)ಅದೇಶ ಹೊರಡಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜುಗಳ ಪ್ರಾಂಶುಪಾಲರಿಗೆ ಶೈಕ್ಷಣಿಕ ನಿರ್ದೇಶಕರು ಸೋಮವಾರ ಪತ್ರವನ್ನು ಕಳುಹಿಸಿದ್ದು, ಪ್ರತಿ ಶಿಕ್ಷಕರ ದೈಹಿಕ ನೋಟ ಶಿಸ್ತಿನಿಂದ ಇರಬೇಕು. ಪ್ರತಿದಿನ ಸ್ನಾನ ಮಾಡಿ, ಉತ್ತಮವಾದ ಪರ್ ಫ್ಯೂಮ್ ಹಾಕಿ ಶಾಲೆಗೆ ಹೋಗಬೇಕು. ಉಗುರುಗಳೆಲ್ಲ ಸರಿಯಾಗಿ ಕತ್ತರಿಸಿರಬೇಕು. ಇನ್ನು ಪುರುಷರು ತಮ್ಮ ಗಡ್ಡಗಳನ್ನು ಆಗಾಗ ಟ್ರಿಮ್ ಮಾಡಿ, ಶಿಸ್ತಿನಿಂದ ಇಟ್ಟುಕೊಳ್ಳಬೇಕು. ತಲೆಕೂದಲು ಬಿಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲಾ ನಿಯಮಗಳನ್ನು ಪಾಕಿಸ್ತಾನದ ಶಿಕ್ಷಕರು ಕಚೇರಿ ಸಮಯದಲ್ಲಿ, ಕ್ಯಾಂಪಸ್, ಗ್ರೌಂಡ್ ಮತ್ತು ಮೀಟಿಂಗ್ ಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾಗಿದೆ.
ಮಹಿಳಾ ಶಿಕ್ಷಕರು ಜೀನ್ಸ್ ಮತ್ತು ಬಿಗಿಯಾದ ಉಡುಪುಗಳನ್ನು ಧರಿಸಿ ಬರುವಂತಿಲ್ಲ. ಸಲ್ವಾರ್ ಕಮೀಜ್, ಪೈಜಾಮಾ ಮಾದರಿಯ ಪ್ಯಾಂಟ್, ಸಡಿಲವಾದ ಶರ್ಟ್ ಬಳಸಬಹುದು. ದುಪ್ಪಟ್ಟಾ, ಶಾಲುಗಳು ಇರಬೇಕು. ಹಿಜಾಬ್, ಬುರ್ಕಾ ಧರಿಸಬಹುದು. ಚಳಿಗಾಲಲ್ಲಿ ಸ್ವೆಟರ್, ಬ್ಲೇಜರ್, ಕೋಟ್ ಇತ್ಯಾದಿಗಳನ್ನು ಧರಿಸುವಂತೆ ತಿಳಿಸಲಾಗಿದೆ.










