ಚಾಮರಾಜನಗರ : ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನೀಡಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ಚಂದ್ರಶೇಖರ್ (21) ಶಿಕ್ಷೆಗೊಳಗಾದ ಅಪರಾಧಿ. 16 ವರ್ಷದ ಶಾಲಾ ಬಾಲಕಿಯನ್ನು ಸತತವಾಗಿ ಹಿಂಬಾಲಿಸಿ, ಪ್ರೀತಿಯ ಹೆಸರಿನಲ್ಲಿ ಮದುವೆಯಾಗುವುದಾಗಿ ಅಪಹರಣಗೊಳಿಸಿದ್ದ. ಅಲ್ಲದೇ ಮಹದೇವಮ್ಮ ಎಂಬ ಮಹಿಳೆ ಅಪರಾಧಿ ಚಂದ್ರುಗೆ ಆಶ್ರಯ ನೀಡಿದ್ದಳು. 5 ದಿನಗಳ ಕಾಲ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ದೃಢಪಟ್ಟಿದೆ.
ಘಟನೆ ಸಂಬಂಧ 2018ರ ಜುಲೈನಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂರು ವರ್ಷಗಳಿಂದ ತನಿಖೆ ನಡೆಸಿದ ಬಳಿಕ ನ್ಯಾಯಾಲಯ ಅಪರಾಧಿಗೆ ಶಿಕ್ಷೆ ಪ್ರಕಟಿಸಿದೆ. ಚಾಮರಾಜನಗರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ನ್ಯಾಯಮೂರ್ತಿ ಸದಾಶಿವ ಎಸ್.ಸುಲ್ತಾನ್ ಪುರೆ ಅವರು ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 5 ಲಕ್ಷ ರೂ. ದಂಡ ಹಾಗೂ ಅಪರಾಧಿಗೆ ಸಹಕರಿಸಿದ ಮಹಾದೇವಮ್ಮಗೆ 5 ವರ್ಷ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.










