ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿಗಳ ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾಲಿನ್ಯದ ಪ್ರಮಾಣ ತಗ್ಗಿಸುವ ಸಂಬಂಧ ಅರವಿಂದ್ ಕೇಜ್ರಿವಾಲ್, ಪರಿಸರ ಸಚಿವ ಗೋಪಾಲ್ ರಾಯ್ ಇಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಜೊತೆಗೆ ಸಭೆ ನಡೆಸಿದ ಬಳಿಕ ಪಟಾಕಿ ನಿಷೇಧಿಸಲು ತೀರ್ಮಾನಿಸಲಾಯಿತು.
ದೀಪಾವಳಿಯ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿನ ತೀವ್ರ ಮಾಲಿನ್ಯದ ಮಟ್ಟವನ್ನು ನೋಡಿ ಕಳೆದ ವರ್ಷದಂತೆ ಈ ಬಾರಿಯೂ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ ಎಂದು ಟ್ವೀಟ್ ನಲ್ಲಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಕಳೆದ ವರ್ಷ ವ್ಯಾಪಾರಿಗಳು ಪಟಾಕಿಗಳನ್ನು ಸಂಗ್ರಹಿಸಿದ ನಂತರ ಮಾಲಿನ್ಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ನಿಷೇಧವನ್ನು ತಡವಾಗಿ ವಿಧಿಸಲಾಯಿತು ಇದು ವ್ಯಾಪಾರಿಗಳಿಗೆ ನಷ್ಟವನ್ನು ಉಂಟುಮಾಡಿತು. ಈ ಬಾರಿ ಸಂಪೂರ್ಣ ನಿಷೇಧದ ದೃಷ್ಟಿಯಿಂದ, ಯಾವುದೇ ರೀತಿಯ ಶೇಖರಣೆಯನ್ನು ಮಾಡಬೇಡಿ ಎಂದು ಎಲ್ಲ ವ್ಯಾಪಾರಿಗಳಿಗೆ ಅವರು ಮನವಿ ಮಾಡಿದರು.










