ಭೋಪಾಲ್ : ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಜಗಳ ಮಧ್ಯೆ ಕೋಪಗೊಂಡ ಗಂಡ ಹೆಂಡತಿಯ ಮೂಗು ಕಚ್ಚಿರುವ ಘಟನೆ ವರದಿಯಾಗಿದೆ.
ಘಟನೆ ಸಂಬಂಧ ಅಲೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2008 ರಲ್ಲಿ ದಿನೇಶ್ ಮತ್ತು ಟೀನಾ ಉಜ್ಜಯಿನಿಯಲ್ಲಿ ಮದುವೆಯಾದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತನ್ನ ಪತಿ ನಿರುದ್ಯೋಗಿ ಮತ್ತು ಮದ್ಯವೆಸನಿಯಾಗಿದ್ದ. ಮದುವೆಯಾದ ತಕ್ಷಣ ಟೀನಾ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದಳು. ಕಿರುಕುಳದಿಂದ ಬೇಸತ್ತು ಆಕೆ ತನ್ನ ಹೆಣ್ಣುಮಕ್ಕಳೊಂದಿಗೆ ತವರು ಮನೆಯಲ್ಲಿ ವಾಸವಾಗಿದ್ದು ಅಡುಗೆ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಳು. 2019 ರಲ್ಲಿ ಆಕೆ ತನ್ನ ಪತಿಯಿಂದ ಕುಟುಂಬ ನಿರ್ವಹಣೆಯ ವೆಚ್ಚಕ್ಕೆ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಳು.
ದಿನೇಶ್ ಇತ್ತೀಚೆಗೆ ಟೀನಾಳ ಪೋಷಕರ ಮನೆಗೆ ಭೇಟಿ ನೀಡಿ ಈ ವಿಷಯದ ಬಗ್ಗೆ ಚರ್ಚಿಸಿದರು. ಈ ವೇಳೆ ಗಂಡ ಮತ್ತು ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆಯಿತು. ಕೋಪಗೊಂಡ ದಿನೇಶ್ ಟೀನಾ ಮೇಲೆ ಹಲ್ಲೆ ಮಾಡಿದನು ಮತ್ತು ಆಕೆಯ ಮೂಗನ್ನು ಕಚ್ಚಿದ್ದಾನೆ. ಟೀನಾ ಮೂಗಿನಿಂದ ರಕ್ತಸ್ರಾವವಾಗುವುದನ್ನು ಗಮನಿಸಿದಾಗ ದಿನೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಟೀನಾ ಮತ್ತು ಆಕೆಯ ಹೆಣ್ಣು ಮಕ್ಕಳ ಕೂಗು ಕೇಳಿದ ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಸಂತ್ರಸ್ತೆಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಟೀನಾ ಪತಿ ದಿನೇಶ್ ರನ್ನು ಬಂಧಿಸಲಾಗಿದೆ ಎಂದು ಅಲೋಟೆ ಪೊಲೀಸ್ ಠಾಣೆಯ ಪ್ರಭಾರಿ ನೀರಜ್ ಸರ್ವಾನ್ ತಿಳಿಸಿದ್ದಾರೆ.










