ಮುಂಬೈ : ವ್ಯಕ್ತಿಯೋರ್ವನಿಗೆ ಕೋವಿಡ್ ಲಸಿಕೆ ಬದಲು ಆ್ಯಂಟಿ ರೇಬಿಸ್ ಲಸಿಕೆ ನೀಡಿದ ಆಸ್ಪತ್ರೆಯ ವೈದ್ಯೆ ಮತ್ತು ನರ್ಸ್ ನನ್ನು ಅಮಾನತು ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸೋಮವಾರ ಕಲ್ವಾ ಪ್ರದೇಶದಲ್ಲಿರುವ ಆಟ್ಕೋನೇಶ್ವರ್ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ರಾಜಕುಮಾರ್ ಯಾದವ್ ಎಂಬಾತ ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್ ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದರು. ಆದರೆ ಅಲ್ಲಿ ಆ್ಯಂಟಿ ರೇಬಿಸ್ ಲಸಿಕೆಯ ಕ್ಯೂನಲ್ಲಿ ನಿಂತ ಅವರಿಗೆ ವೈದ್ಯರು ಯಾವ ಪ್ರಶ್ನೆಯನ್ನೂ ಕೇಳದೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿದ್ದಾರೆ.
ಲಸಿಕೆ ಹಾಕಿಸಿಕೊಂಡ ಬಳಿಕ ಎರಡನೇ ಲಸಿಕೆಗೆ ಯಾವಾಗ ಬರಬೇಕೆಂದು ಕೇಳಿದಾಗ ಅಲ್ಲಿನ ಸಿಬ್ಬಂದಿ ಆತನಿಗೆ ನೀಡಿದ್ದು ರೇಬಿಸ್ ಲಸಿಕೆ ಎಂದು ತಿಳಿಸಿದ್ದಾರೆ. ಸದ್ಯ ಆ ವ್ಯಕ್ತಿ ಆರೋಗ್ಯದಿಂದಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ..
ತನಗೆ ತಪ್ಪು ಲಸಿಕೆ ನೀಡಿದ ಬಗ್ಗೆ ರಾಜಕುಮಾರ್ ಯಾದವ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಯಾವ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ ಎಂಬುದನ್ನು ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಕ್ಕೆ ಇಂಜೆಕ್ಷನ್ ನೀಡಿದ ವೈದ್ಯೆ, ನರ್ಸ್ ನನ್ನು ಅಮಾನತು ಮಾಡಲಾಗಿದೆ.










