ಇಂದು ರಾಷ್ಟ್ರಪಿತ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ – ಇಬ್ಬರು ಮಹಾನ್ ನಾಯಕರಿಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ.

82
firstsuddi

ನವದೆಹಲಿ : ಇಂದು ಮಹಾತ್ಮ ಗಾಂಧೀಜಿ 152ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 118ನೇ ಜನ್ಮದಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಬ್ಬರು ಮಹಾನ್ ನಾಯಕರಿಗೆ ನಮನ ಸಲ್ಲಿಸಿದರು. ಮೊದಲು ರಾಜ್​ಘಾಟ್ ನಲ್ಲಿರುವ ಗಾಂಧೀಜಿ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ನಮಿಸಿದರು. ಬಳಿಕ ವಿಜಯ್ ಘಾಟ್ ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಿದರು. 

ಇದಕ್ಕೂ ಮೊದಲು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದಂದು ಅವರಿಗೆ ವಿನಮ್ರ ನಮನಗಳು. ಪೂಜ್ಯ ಬಾಪು ಅವರ ಜೀವನ ಮತ್ತು ಆದರ್ಶಗಳು ದೇಶದ ಪ್ರತಿಯೊಂದು ಪೀಳಿಗೆಯನ್ನು ಕರ್ತವ್ಯದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ ಎಂದಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಟ್ವೀಟ್ ಮೂಲಕ ಸ್ಮರಿಸಿರುವ ಅವರು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದಂದು ಅವರಿಗೆ ನಮನಗಳು. ಮೌಲ್ಯಗಳು ಮತ್ತು ತತ್ವಗಳನ್ನು ಒಳಗೊಂಡಿದ್ದ ಅವರ ಜೀವನವು ಈ ದೇಶ ವಾಸಿಗಳಿಗೆ ಸದಾಕಾಲಕ್ಕೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.

ಇನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೂ ಕೂಡ ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿಯವರಿಗೆ ನಮನ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿ ಎಲ್ಲ ರಾಜಕೀಯ ಗಣ್ಯರೂ ಇಬ್ಬರೂ ಮಹಾನ್ ನಾಯಕರಿಗೆ ಗೌರವ ಸಲ್ಲಿಸಿದ್ದಾರೆ.