ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕೊಲೆ ಕೇಸ್ ದಾಖಲು…

95
firstsuddi

ಲಕ್ನೋ : ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಆರೋಪ ಅವರ ಮೇಲಿದೆ. ಆಶೀಶ್ ಮಿಶ್ರಾ ಸೇರಿ ಹಲವರ ಹೆಸರು ಎಫ್ಐಆರ್ ನಲ್ಲಿದೆ.

ನಿನ್ನೆ ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಭೇಟಿ ವಿರೋಧಿಸಿ ಹಲವು ರೈತರು ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅಜಯ್ ಮಿಶ್ರಾ ಬೆಂಗಾವಲು ಪಡೆಯ ವಾಹನ ಮತ್ತು ಆಶೀಶ್ ಮಿಶ್ರಾರ ಕಾರು ಅವರ ಕಾರು ಹರಿದಿದ್ದವು ಎಂದು ವರದಿಯಾಗಿತ್ತು.

ಕಾರು ಹರಿದು ಇಬ್ಬರು ರೈತರು ಮೃತಪಟ್ಟ ಬೆನ್ನಲ್ಲೇ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ಒಬ್ಬ ಪತ್ರಕರ್ತ, ನಾಲ್ವರು ರೈತರು ಸೇರಿ ಎಂಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಈಗ ಕೂಡ ಲಖಿಂಪುರ ಖೇರಿಯಲ್ಲಿ ಉದ್ವಿಗ ಪರಿಸ್ಥಿತಿ ಇದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಸಚಿವರ ಪುತ್ರ ಆಶೀಶ್ ಮಿಶ್ರಾ, ‘ನಾನು ಬೆಳಗ್ಗೆ 9 ಗಂಟೆಯಿಂದ, ಘಟನೆ ನಡೆದ ಬಳಿಕವೂ ಬನ್ಬೀರ್ಪುರದಲ್ಲಿದ್ದೆ. ಕಳೆದ 2 ದಿನಗಳಿಂದ ಆ ಸ್ಥಳಕ್ಕೆ ಹೋಗಿರಲಿಲ್ಲ. ಕೆಲವರು ತಮ್ಮ ರಾಜಕೀಯ ಉದ್ದೇಶದಿಂದ ನನ್ನ ಹೆಸರು ಬಳಸುತ್ತಿರಬಹುದು’ ಎಂದು ಆರೋಪಿಸಿದರು.