ದೇಶದಲ್ಲಿ ಜನಸಂಖ್ಯಾ ಅಸಮತೋಲನ ದೊಡ್ಡ ಸಮಸ್ಯೆಯಾಗಿದೆ : ಮೋಹನ್ ಭಾಗವತ್.

137
firstsuddi

ನಾಗಪುರ : ಇಂದು ನಾಗಪುರದಲ್ಲಿ ವಿಜಯ ದಶಮಿ ಹಬ್ಬದ ಹಿನ್ನೆಲೆ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಅವರು, ದೇಶದಲ್ಲಿ ಜನಸಂಖ್ಯಾ ಅಸಮತೋಲನ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜನಸಂಖ್ಯಾ ನೀತಿಯನ್ನು ಮತ್ತೊಮ್ಮೆ ಪರಿಗಣಿಸಿ, ಹೊಸ ನೀತಿಯನ್ನು ರೂಪಿಸಬೇಕು ಮತ್ತು ಅದನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಸ್ವತಂತ್ರ ಭಾರತದ ಆದರ್ಶಗಳೊಂದಿಗೆ ಪ್ರಸ್ತುತ ಸನ್ನಿವೇಶವನ್ನು ಹೋಲಿಸಿದಾಗ ಮತ್ತು ವ್ಯತಿರಿಕ್ತಗೊಳಿಸಿದಾಗ, ಸ್ವಾಧೀನತದಿಂದ ಸ್ವಾತಂತ್ರ್ಯದವರೆಗೂ ನಮ್ಮ ಪ್ರಯಾಣ ಪೂರ್ಣಗೊಂಡಿಲ್ಲ. ಏಕೆಂದರೆ ಜಗತ್ತಿನಲ್ಲಿ ಭಾರತ ಪ್ರಗತಿ ಮತ್ತು ಗೌರವಾನ್ವಿತ ಸ್ಥಾನಕ್ಕೆ ಏರುವ ಅಂಶಗಳು ಅವರ ಪಟ್ಟಭದ್ರ ಹಿತಾಸಕ್ತಿಗಳಿಗೆ ಅಸಮತೋಲನ ಅಡ್ಡಿಯುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.

ಕಾಶ್ಮೀರದ ಜನರ ಮನಸ್ಸನ್ನು ಭಾರತದ ಜೊತೆಗೆ ಜೋಡಿಸಬೇಕು. ನಾವು ದುರ್ಬಲವಾದಾಗ ಬೇರೆಯವರಿಗೆ ಹೆದರಬೇಕಾಗುತ್ತದೆ. ನಾವು ಸದೃಢವಾಗಬೇಕು. ಕಾಶ್ಮೀರದಲ್ಲಿ ಮುಗ್ದರನ್ನು ಉಗ್ರರು ಹತ್ಯೆ ಮಾಡುತ್ತಿದ್ದಾರೆ. ಹಿಂದೂಗಳು ಸಂಘಟಿತರಾಗಬೇಕು. ಜಾಗೃತ, ಬಲಶಾಲಿ, ಸಂಘಟಿತ ಹಿಂದೂ ಸಮಾಜದಿಂದಲೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಮೋಹನ್ ಭಾಗವತ್ ಅಭಿಪ್ರಾಯ ಪಟ್ಟಿದ್ದಾರೆ.

ದೇಶದ ಗಡಿಯಲ್ಲಿ ಉಗ್ರರ ನುಸುಳುವಿಕೆಯನ್ನು ಸಂಪೂರ್ಣ ತಡೆಗಟ್ಟಬೇಕು. ಭಾರತದ ಭಾಗ್ಯ ಬದಲಾಗುವುದು ವಿಶ್ವಕ್ಕೆ ಅಗತ್ಯ. ಮೂರನೇ ಕೊರೊನಾ ಅಲೆ ಬರುವ ಸಾಧ್ಯತೆ ಕಡಿಮೆಯಿದೆ. ಆದರೂ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಮ್ಮ ಸಾಮರ್ಥ್ಯವನ್ನು ದುರ್ಬಲರ ರಕ್ಷಣೆಗೆ ಬಳಸಬೇಕು. ಹಿಂದೂ ಸಮಾಜವನ್ನು ಸದೃಢವಾಗಿಸಬೇಕು. ನಮ್ಮ ಜೊತೆಗೆ ಮುಸ್ಲಿಮರು ಕೂಡ ಇರಬೇಕು ಎಂದಿದ್ದಾರೆ.