ಬೆಂಗಳೂರು : ಸ್ಯಾಂಡಲ್ವುಡ್ ನ ನಿರ್ದೇಶಕ ಜೋಗಿ ಪ್ರೇಮ್ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ. ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಇದೇ ಅಕ್ಟೋಬರ್ 22ರಂದು ನನ್ನ ಹುಟ್ಟುಹಬ್ಬವಿದೆ. ಪ್ರತಿ ಬಾರಿ ನನ್ನ ಅನ್ನದಾತರು, ಸ್ನೇಹಿತರು ಹಾಗೂ ನನ್ನ ಬಂಧು, ಬಳಗದವರು ಪ್ರತಿಯೊಬ್ಬರು ಬಂದು ಶುಭಾಶಯ ತಿಳಿಸಿ ಹೋಗುತ್ತಿದ್ದರು. ಆದರೆ ನಾನು ಈ ಬಾರಿ ಮನೆಯಲ್ಲಿ ಇರುವುದಿಲ್ಲ. ಕಾರಣ ಏಕಲವ್ಯ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ನಾನು ಮುಂಬೈನಲ್ಲಿರುತ್ತೇನೆ. ಹಾಗಾಗಿ ದಯವಿಟ್ಟು ಯಾರೂ ಕೂಡ ಮನೆಯ ಬಳಿ ಬಂದು ಕಾಯಬೇಡಿ. ಎಲ್ಲೆ ಇದ್ದರೂ ದೂರದಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ನಿಮ್ಮಲ್ಲಿ ಪ್ರೀತಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಇದೇ ವೇಳೆ, ನವೆಂಬರ್ 4ರಂದು ಈ ಬಾರಿ ದೀಪಾವಳಿ ಹಬ್ಬದ ದಿನ ‘ಏಕ್ ಲವ್ ಯಾ’ ಸಿನಿಮಾದ ಮೂರನೇ ಹಾಡನ್ನು ಬಿಡುಗಡೆಗೊಳಿಸುತ್ತಿದ್ದೇವೆ. ಈಗಾಗಲೇ ಎರಡು ಹಾಡನ್ನು ಹಿಟ್ ಮಾಡಿಕೊಟ್ಟಿದ್ದೀರಾ. ಈಗ ಮತ್ತೊಂದು ಲವ್ ಬ್ರೇಕ್ ಅಪ್ ಸಾಂಗ್ ರಿಲೀಸ್ ಆಗುತ್ತಿದೆ. ಈ ಹಾಡನ್ನು ವಿಶೇಷವಾಗಿ ಹುಡುಗಿಯರಿಗೆಂದು ಬಿಡುಗಡೆ ಮಾಡಲಾಗುತ್ತಿದೆ. ಹಾಡನ್ನು ಕೇಳಿ, ನೋಡಿ, ಬೆಂಬಲಿಸಿ ಮತ್ತು ಜನವರಿ 21ಕ್ಕೆ ‘ಏಕ್ ಲವ್ ಯಾ’ ಸಿನಿಮಾ ಎಲ್ಲೆಡೆ ಬಿಡುಗಡೆಗೊಳಿಸಲಾಗುತ್ತಿದೆ. ನಿಮ್ಮ ಪ್ರೀತಿ ವಿಶ್ವಾಸ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ತಿಳಿಸಿದ್ದಾರೆ.










