ಚಿಕ್ಕಮಗಳೂರು : ಆಜಾದ್‍ಪಾರ್ಕ್ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ನೀಡಿದ ಶಿಕ್ಷಕರು…

66
firstsuddi

ಚಿಕ್ಕಮಗಳೂರು : ಒಂದರಿಂದ ಐದರವರೆಗೆ ತರಗತಿಗಳು ಮರು ಆರಂಭಗೊಂಡ ಹಿನ್ನೆಲೆಯಲ್ಲಿ ನಗರದ ಆಜಾದ್‍ಪಾರ್ಕ್ ಕನ್ನಡ ಶಾಲೆಯಲ್ಲಿ ಇಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ನೀಡಿದರು.

ಒಂದೂವರೆ ವರ್ಷಗಳ ಸುದೀರ್ಘ ಅವಧಿಯ ನಂತರ ತರಗತಿಗಳು ಮರು ಆರಂಭಗೊಂಡ ಹಿನ್ನೆಲೆಯಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು.

ಪಂಜರದಿಂದ ಹೊರಬಂದ ಹಕ್ಕಿಗಳಂತೆ ಕುಣಿದು ಕುಪ್ಪಳಿಸುತ್ತ ಶಾಲೆಗೆ ಆಗಮಿಸಿದ ಚಿಣ್ಣರನ್ನು ಶಿಕ್ಷಕರು ಸಂಭ್ರಮ, ಸಡಗರದಿಂದ ಆರತಿ ಎತ್ತಿ ಪುಷ್ಪವೃಷ್ಟಿಗೈದು ಗುಲಾಬಿ ಹೂ ಮತ್ತು ಸಿಹಿ ನೀಡಿ ಪ್ರೀತಿಯಿಂದ ಬರಮಾಡಿಕೊಂಡರು.

ನಂತರ ಪ್ರತಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಂದೆ ವಿದ್ಯಾಭ್ಯಾಸಕ್ಕೆ ಯಾವುದೇ ವಿಘ್ನ ಬಾರದಂತೆ ಪ್ರಾರ್ಥಿಸಿದರು.

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮುಖ್ಯ ಶಿಕ್ಷಕಿ ಬಿ.ಆರ್.ಗೀತ 39 ವಿದ್ಯಾರ್ಥಿಗಳು ಶಾಲೆಗೆ ದಾಖಲಾತಿ ಪಡೆದಿದ್ದರೂ ಇಂದು 21 ವಿದ್ಯಾರ್ಥಿಗಳು ಮಾತ್ರ ಆಗಮಿಸಿದ್ದು ಉಳಿದ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರ ಪೋಷಕರ ಮನವೊಲಿಸಿ ಶಾಲೆಗೆ ಕರೆತರಲಾಗುವುದು ಎಂದು ತಿಳಿಸಿದರು.

ದೈಹಿಕ ಶಿಕ್ಷಕ ಎಸ್.ಇ.ಲೋಕೇಶ್ವರಾಚಾರ್ ಮಾತನಾಡಿ ಅಕ್ಟೋಬರ್ 29 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯಲಿದ್ದು ನವೆಂಬರ್ 2 ರಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಯಲಿದೆ ಎಂದು ಹೇಳಿದರು.