ಮಡಿಕೇರಿ : ಪ್ರವಾಸಕ್ಕೆಂದು ಬಂದು ಹೋಂ ಸ್ಟೇನಲ್ಲಿ ತಂಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ವಿಘ್ನೇಶ್ವರಿ(24) ಮೃತ ವಿದ್ಯಾರ್ಥಿನಿ. ಇದೇ ಶನಿವಾರ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು.
ನಿನ್ನೆ ರಾತ್ರಿ ಸ್ನಾನಕ್ಕೆಂದು ಬಾತ್ ರೂಮಿಗೆ ತೆರಳಿದ್ದ ವಿಘ್ನೇಶ್ವರಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ವಿದ್ಯಾರ್ಥಿನಿ ಜೊತೆಯಲ್ಲಿದ್ದ ಉಳಿದ ನಾಲ್ವರು ಯುವತಿಯರು ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣವೇ ಮಾಲೀಕ ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










