ಚಿಕ್ಕಮಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನ – ಚುನಾವಣಾ ಪ್ರಣಾಳಿಕೆ ಬಿಡುಗಡೆ…

72
firstsuddi

ಚಿಕ್ಕಮಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂ.ಸಿ.ಶಿವಾನಂದ ಸ್ವಾಮಿ ಅವರ ಚುನಾವಣಾ ಪ್ರಣಾಳಿಕೆಯನ್ನು ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಕುಂದೂರು ಅಶೋಕ್ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ಇಂದು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಎಂ.ಸಿ.ಶಿವಾನಂದ ಸ್ವಾಮಿ ಅವರು 1 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪರಿಷತ್ತಿನ ಮತದಾರರ ಮನದಲ್ಲಿ ಎಂ.ಸಿ.ಶಿವಾನಂದ ಸ್ವಾಮಿ ಅವರ ಬಗ್ಗೆ ಒಲವಿದೆ, ಜಿಲ್ಲಾದ್ಯಂತ ಅವರ ಪರವಾದ ಗಾಳಿ ಬೀಸುತ್ತಿದೆ, ಅವರ ಅಪಾರ ಅನುಭವವನ್ನು ಈ ಬಾರಿ ಚುನಾವಣೆಯಲ್ಲಿ ಬಳಸಿಕೊಂಡು ಜಿಲ್ಲೆಯಲ್ಲಿ ಕನ್ನಡದ ತೇರನ್ನು ಮತ್ತು ಪರಿಷತ್ತನ್ನು ಮುನ್ನಡೆಸುವ ಅಗತ್ಯವಿದೆ ಎಂದರು.

ಅಭ್ಯರ್ಥಿ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ ಕನ್ನಡದ ಮುಳ್ಳಯ್ಯನಗಿರಿಯಲ್ಲಿ ಕನ್ನಡ ಭುವನೇಶ್ವರಿಯ ವಿಗ್ರಹದ ಸ್ಥಾಪನೆ ಸೇರಿದಂತೆ ತಮ್ಮಲ್ಲಿ ಹತ್ತು ಹಲವು ಯೋಜನೆಗಳು ಮತ್ತು ಕನಸಿದ್ದು, ಅವುಗಳನ್ನು ಸಾಕಾರಗೊಳಿಸಲು ಜಿಲ್ಲಾ ಕಸಾಪ ಸದಸ್ಯರು ತಮ್ಮ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಅಭಿಮಾನಿಗಳು ವಿವಿಧ ಸಂಘಟನೆಗಳು ಮತ್ತು ಹಿತೈಷಿಗಳೊಂದಿಗೆ ಶಿವಾನಂದ ಸ್ವಾಮಿ ಅವರು ದೇವಾಲಯದಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಬಸಪ್ಪ, ಕಸಾಪ ನಿಕಟಪೂರ್ವ ತಾಲ್ಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಜಿಲ್ಲಾ ಖಜಾಂಚಿ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ಪರಿಷತ್ತಿನ ಆಜೀವ ಸದಸ್ಯರಾದ ಗುರುಶಾಂತಪ್ಪ, ಬಿ.ಅಮ್ಜದ್, ಪತ್ರಕರ್ತ ಎನ್.ರಾಜು, ಪದ್ಮಾ ತಿಮ್ಮೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಮೇಶ್ವರಪ್ಪ, ಡಾ|| ರಾಜ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ, ಸಾಹಿತಿ ಬಾಣೂರು ಚನ್ನಬಸಪ್ಪ, ನ್ಯಾಯವಾದಿ ಜೆ.ಕೆ.ಸೋಮಶೇಖರ್, ಜೇಮ್ಸ್, ರಂಗಕರ್ಮಿ ವಿಲಿಯಂ ಪೆರೇರಾ, ಸಿರಿಮನೆ ಪ್ರಸಾದ್ ಹಾಜರಿದ್ದರು.