ಇಂದು ಮಧ್ಯಾಹ್ನ 3 ಗಂಟೆಗೆ ‘ಪುನೀತ ನಮನ’ ಕಾರ್ಯಕ್ರಮ…

92
firstsuddi

ಬೆಂಗಳೂರು : ಪುನೀತ್ ರಾಜ್​ಕುಮಾರ್ ಅಗಲಿ 18 ದಿನಗಳು ಕಳೆದಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ‘ಪುನೀತ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ.

ಈಗಾಗಲೇ 2000 ವಿಐಪಿ ಪಾಸ್ ಗಳನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಪುನೀತ ನಮನ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಸಿಎಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಅಪ್ಪು ನಮನಕ್ಕೆ ಬರುವ ಕಾರಣ ಸೂಕ್ತ ಪೊಲೀಸ್ ಬಿಗಿ ಭದ್ರತೆಯನ್ನೂ ಒದಗಿಸಲಾಗುತ್ತೆ. ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಭಾಗವಹಿಸಬೇಕು ಎಂಬ ಉದ್ದೇಶದಿಂದ ಇಂದು, ಚಿತ್ರ ಪ್ರದರ್ಶನ ಹೊರತುಪಡಿಸಿ, ಚಿತ್ರೋದ್ಯಮದ ಮತ್ತೆಲ್ಲಾ ಕೆಲಸಗಳಿಗೆ ರಜೆ ಘೋಷಿಸಲಾಗಿದೆ.

ಸ್ಯಾಂಡಲ್ವುಡ್ ನ 142 ಕಲಾವಿದರಿಗೆ ಆಹ್ವಾನ ನೀಡಲಾಗಿದ್ದು, ಪರಭಾಷೆಯ 40 ಕ್ಕೂ ಹೆಚ್ಚು ಕಲಾವಿದರು ಪುನೀತ ನಮನಕ್ಕೆ ಬರಲಿದ್ದಾರೆ. ಸುದೀಪ್, ಯಶ್, ಗಣೇಶ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗಲಿದ್ದು, ಪುನೀತ್ ಜೊತೆ ನಟಿಸಿದ ಎಲ್ಲಾ ನಾಯಕಿಯರು, ಹಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಮೈಸೂರಿನ ಮಹಾರಾಜ ಯದುವೀರ್ ಕೂಡ ಬರಲಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಗಳಾದ ನಟ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್ಟಿಆರ್, ಪ್ರಭಾಸ್, ರಾಮ್ ಚರಣ್, ಮೋಹನ್ ಲಾಲ್, ಅಮಿತಾಭ್ ಬಚ್ಚನ್ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ.

ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಮೂಲಕ ಪುನೀತ್ಗೆ ನಮನ ಸಲ್ಲಿಸಲಾಗುತ್ತದೆ. ಗುರುಕಿರಣ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಈ ಗೀತೆಯ ಮೂಲಕ ಕಾರ್ಯಕ್ರಮ ಆರಂಭ ಆಗಲಿದೆ. ವಿಜಯ್ ಪ್ರಕಾಶ್, ಗುರುಕಿರಣ್ ಹಾಗೂ ರಾಜೇಶ್ ಕೃಷ್ಣನ್ ಅವರಿಂದ ಗೀತ ನಮನ ನಡೆಯಲಿದೆ. ಮಧ್ಯಾಹ್ಯ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.