ಕಲಬುರಗಿ : ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರೂ ಆಗಿರುವ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವುದಾಗಿ ಯುವತಿ ಗಂಭೀರವಾಗಿ ಆರೋಪಿಸಿದ್ದಳು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ನೇಹಲ್ ಲೋಖಂಡೆ ಅವರು, ಆ ಯುವತಿ ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಮಾನಹಾನಿಯಾಗುತ್ತಿದೆ. ನಾನು ಈ ಕುರಿತಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇನೆ. ಕಲಬುರಗಿ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿ ನನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ವಾಟ್ಸಾಪ್ ಚಾಟ್, ಫೋಟೋ ಎಲ್ಲವೂ ಕೂಡ ಫೇಕ್. ಆ ಯುವತಿ ಬರೆದಿರುವ ಪತ್ರವನ್ನು ಓದಿದ್ದೇನೆ. ಅದೆಲ್ಲಾವೂ ಕೂಡ ಸುಳ್ಳು ಎಂದು ಹೇಳಿದ್ದಾರೆ.
ಯುವತಿ ದೆಹಲಿ ಮೂಲದವಳಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಅವರಿಗೆ ಟ್ವಿಟ್ಟರ್ ಮೂಲಕ ಪತ್ರ ಬರೆದು ಲಗತ್ತಿಸಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಪತ್ರ ಸದ್ಯ ವೈರಲ್ ಆಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಯುವತಿ ಬರೆದಿರುವ ಪತ್ರದಲ್ಲಿ ಏನಿದೆ:
`ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದಾಗ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಸ್ನೇಹಲ್ ಲೋಖಂಡೆ ನನ್ನ ಮೇಲೆ ಆಸಕ್ತಿ ತೋರಿಸಿದರು. ಮೇ 26, 2019ರಂದು ದೆಹಲಿಯಲ್ಲಿ ನನ್ನನ್ನು ಭೇಟಿ ಆಗಿದ್ದ ಸ್ನೇಹಲ್ ಮೂರು ದಿನ ನನ್ನ ಜೊತೆಗೆ ಇದ್ದರು. ನನ್ನ ಹುಟ್ಟುಹಬ್ಬ ಆಚರಿಸಲು ನನ್ನ ತಾಯಿಯ ಅನುಮತಿ ಪಡೆದು ಜುಲೈ 8ರಂದು ಹೌನ್ಜ್ ಖಾಸ್ ಗೆ ಮಧ್ಯರಾತ್ರಿ ಹೋಗಿದ್ದೆವು. ಜುಲೈ 20, 2019ರಂದು ನನ್ನನ್ನು ಮದ್ವೆ ಆಗುವುದಾಗಿ ಹೇಳಿದ್ದ ಅವರು, ಕೆ ಜಿ ಮಾರ್ಗ್ ನಲ್ಲಿರುವ ತನ್ನ ಹಾಸ್ಟೆಲ್ ಗೆ ಬರುವಂತೆ ಹೇಳಿ ಅಲ್ಲಿ ನಾವಿಬ್ಬರೂ ಒಂದು ರಾತ್ರಿ ಜೊತೆಯಾಗಿ ಕಳೆದಿದ್ವಿ. ಮರು ದಿನ ನನ್ನನ್ನು ಭೇಟಿ ಆಗಿದ್ದ ಅವರು ಐ-ಪಿಲ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದರು. ಆಗಸ್ಟ್ 4ರಂದು ರಾಯಲ್ ಪ್ಲಾಜಾದಲ್ಲಿ ಅವರು ರೂಂ ಬುಕ್ ಮಾಡಿದ್ದರು, ಅವತ್ತು ಅಲ್ಲಿ ಒಟ್ಟಿಗೆ ಉಳಿದುಕೊಂಡೆವು. ನಾನು ಎಲ್ಲವನ್ನೂ ನನ್ನ ತಾಯಿಗೆ ಹೇಳಿದ ಬಳಿಕ ನನ್ನ ತಾಯಿ ಅವರ ಹಾಸ್ಟೆಲ್ ನಲ್ಲಿ ಭೇಟಿ ಆಗಿ ಮದ್ವೆ ಬಗ್ಗೆ ಮಾತಾಡಿದರು ಮತ್ತು ಆಗ ಮದುವೆಗೆ ನನಗೆ ಸ್ವಲ್ಪ ಟೈಂ ಬೇಕು ಎಂದು ಹೇಳಿದ್ದರು.
ಕರ್ನಾಟಕದ ಇಂಡಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆದ ಬಳಿಕ ಅವರು ನನ್ನನ್ನು ದೂರವಿರಿಸಲು ಶುರು ಮಾಡಿದರು, 2020ರ ಜನವರಿ 26ರಂದು ನನ್ನ ಹೆತ್ತವರು ಇಂಡಿಗೆ ತೆರಳಿ ಅವರ ತಂದೆ ಸುಧಾಕರ್ ಲೋಖಂಡೆ ಜೊತೆಗೆ ಮಾತಾಡಿದರು. 15 ದಿನಗಳ ಬಳಿಕ ನನ್ನ ತಂದೆ ಸುಧಾಕರ್ ಲೋಖಂಡೆಗೆ ಕರೆ ಮಾಡಿದಾಗ ಅವರು ಕೆಟ್ಟದಾಗಿ ಮಾತಾಡಿದರು ಮತ್ತು ನಿಮ್ಮ ಮಗಳು ನನ್ನ ಮಗನ ಎದುರು ನಿಲ್ಲಲು ಯೋಗ್ಯಳಲ್ಲ ಎಂದರು. ಆ ಬಳಿಕ ಸ್ನೇಹಲ್ ಲೋಖಂಡೆಯಾಗಲೀ ಅವರ ತಂದೆಯಾಗಲೀ ನಮಗೆ ಕರೆ ಮಾಡಿಲ್ಲ. ಅವರಿಗೆ (ಸ್ನೇಹಲ್ಗೆ) ಈ ಮೊದಲು ಒಂದು ಸಂಬಂಧವಿತ್ತು. ಆಕೆ ಮದುವೆ ಆಗುವಂತೆ ಕೇಳಿದಾಗ ಆಕೆಯಿಂದ ದೂರ ಆಗಿದ್ದಾಗಿ ಅವರೇ ನನಗೆ ಆರಂಭದಲ್ಲಿ ಹೇಳಿದ್ದರು. ನನ್ನ ಜೊತೆಗೆ 2 ವರ್ಷ ಸಂಬಂಧದಲ್ಲಿದ್ದ ನನಗೂ ಹಾಗೇ ಮಾಡಿದ್ದಾರೆ. ಇಂತಹ ಅಪರಾಧಕ್ಕಾಗಿ ಅವರು ಜೈಲಿನಲ್ಲಿರಬೇಕು. ಇಲ್ಲವಾದರೆ ಅವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.










