ಬೆಂಗಳೂರು : ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸಾವಿರಾರು ಕೋಟಿಯ ಒಡೆಯ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಸೋಲನ್ನು ಅನುಭವಿಸಿದ್ದಾರೆ.
ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಯೂಸೂಫ್ ಷರೀಫ್ 830 ಮತಗಳನ್ನು ಪಡೆದರೆ ಬಿಜೆಪಿಯ ಗೋಪಿನಾಥ್ ರೆಡ್ಡಿ 1227 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಗೋಪಿನಾಥ್ ರೆಡ್ಡಿ 397 ಮತಗಳಿಂದ ಜಯಭೇರಿ ಬಾರಿಸಿದ್ದಾರೆ.
ವಿಧಾನ ಪರಿಷತ್ ಗೆ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆಜಿಎಫ್ ಬಾಬು ನಾಮಪತ್ರ ಸಲ್ಲಿಸುವ ವೇಳೆ ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಅಲ್ಲದೇ ಕೆಜಿಎಫ್ ಬಾಬು ನಾಮಪತ್ರ ಸಲ್ಲಿಸಲು ಬರುವಾಗ ಐಷಾರಾಮಿ ಕಾರಿನಲ್ಲಿ ಆಗಮಿಸಿ ಎಲ್ಲರ ಗಮನ ಸೆಳೆದಿದ್ದರು. ನಾಮಪತ್ರ ಸಲ್ಲಿಕೆ ನಂತರ ಗೆಲುವಿನ ವಿಶ್ವಾಸದಲ್ಲೇ ಇದ್ದರು. ಆದರೆ, ಇಂದು ಫಲಿತಾಂಶ ಹೊರ ಬೀಳುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಆಟೋ ಹತ್ತಿ ಬೇಸರದಿಂದ ತೆರಳಿದ್ದಾರೆ.










