ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ – ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧ ಪ್ರವೇಶಿಸಿದ ಕೈ ನಾಯಕರು…

55
firstsuddi

ಬೆಳಗಾವಿ : ಜಿಲ್ಲೆಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಭ್ರಷ್ಟಾಚಾರ ಆರೋಪ, ನೆರೆ ಪರಿಹಾರ ತಾರತಮ್ಯ ಸೇರಿದಂತೆ ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಗರದ ರಾಣಿ ಚೆನ್ನಮ್ಮ ಸರ್ಕಲ್ ಹತ್ತಿರವಿರುವ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಿಂದ ಪ್ರಾರಂಭವಾದ ಟ್ರ್ಯಾಕ್ಟರ್ ರ‍್ಯಾಲಿ ಸಂಗೊಳ್ಳಿ ರಾಯಣ್ಣ ವೃತ್ತ, ಆರ್ ಟಿಒ, ಅಶೋಕನಗರ ಹಾಗೂ ಗಾಂಧಿನಗರದ ಸುವರ್ಣಸೌಧದವರೆಗೆ ಮೆರವಣಿಗೆ ಮಾಡಿದ್ದಾರೆ. ಮಾರ್ಗದುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕರಾದ ಪ್ರಿಯಾಂಕ ಖರ್ಗೆ, ಲಕ್ಷ್ಮಿ ಹೆಬ್ಬಾಳ್ಕರ್, ಸೇರಿದಂತೆ ಅನೇಕ ನಾಯಕರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. 

ಪ್ರತಿಭಟನೆ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಏಕೆ ಬೇಕು? ರಾಜ್ಯದ ನೆಮ್ಮದಿ ಕೆಡಿಸಲು ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ನಾವೆಲ್ಲರೂ ಹಿಂದೂಗಳಲ್ಲವೇ? ಬಿಜೆಪಿಯವರು ಸೀತೆಯ ಬಗ್ಗೆ ಏಕೆ ಪ್ರಸ್ತಾಪಿಸುವುದಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕರ ಪ್ರತಿಭಟನಾ ರ‍್ಯಾಲಿ ಸುವರ್ಣ ಸೌಧ ಗೇಟ್ ತಲುಪಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ಮೆರವಣಿಗೆಯನ್ನು ತಡೆದಿದ್ದಾರೆ. ಈ ವೆಳೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಬ್ಯಾರಿಕೇಡ್ ನುಗ್ಗಿ ಒಳಗಡೆ ಹೋಗುವುದಕ್ಕೆ ಪ್ರಯತ್ನಿಸಿದ್ದಾರೆ. ಸುವರ್ಣಸೌಧದ ಗೇಟ್ ಬಳಿ ಭಾರಿ ಹೈಡ್ರಾಮಾ ನಡೆದಿದೆ. ಒಳಗೆಡೆ ಬಿಡುವಂತೆ ಎಸ್ಪಿ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್ ಆರ್ ಪಾಟೀಲ್ ಮಾತುಕತೆ ನಡೆಸಿದ್ದಾರೆ. ಪೊಲೀಸರ ವಿರುದ್ಧ ಡಿಕೆಶಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಾಸಕರ ಬಳಿಯೇ ಪೊಲೀಸರು ಪಾಸ್ ಕೇಳುತ್ತಿದ್ದಾರೆ ಅಂತ ಕಿಡಿ ಕಾರಿದ್ದಾರೆ. ಕೊನೆಗೆ ಸ್ಪೀಕರ್ ಸೂಚನೆ ಮೇರೆಗೆ ಕೈ ನಾಯಕರು ಟ್ರ್ಯಾಕ್ಟರ್ ನಲ್ಲಿ ಸುವರ್ಣ ವಿಧಾನಸೌಧದ ಒಳಗೆ ಪ್ರವೇಶಿಸಿದರು.