ನವದೆಹಲಿ : ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಿಸಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಚುನಾವಣಾ ದಿನಾಂಕದ ಬಗ್ಗೆ ಹಾಗೂ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪಂಚ ರಾಜ್ಯಗಳಿಗೆ ಫೆಬ್ರವರಿ 10 ರಿಂದ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರ ಬೀಳಲಿದೆ.
ಐದು ರಾಜ್ಯಗಳನ್ನೂ ಒಳಗೊಂಡಂತೆ ಒಟ್ಟು 690 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಒಟ್ಟು 18.34 ಕೋಟಿ ಮತದಾರರಿದ್ದಾರೆ. 2,15,368 ಮತಗಟ್ಟೆಗಳಿವೆ. ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.
ಪಂಜಾಬ್, ಗೋವಾ, ಉತ್ತರಾಖಂಡ್ ಗಳಲ್ಲಿ ಫೆ.14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದರೆ, ಮಣಿಪುರದಲ್ಲಿ ಫೆ.27 ರಂದು ಮೊದಲ ಹಂತ ಹಾಗೂ ಮಾ.03 ರಂದು 2 ನೇ ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ 7 ಹಂತದ ಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
7ಹಂತದಲ್ಲಿ ಮತದಾನ :
ಫೆಬ್ರವರಿ 10 – ಮೊದಲ ಹಂತದ ಮತದಾನ
ಫೆಬ್ರವರಿ 14 – 2ನೇ ಹಂತದ ಮತದಾನ
ಫೆಬ್ರವರಿ 20 – 3ನೇ ಹಂತದ ಮತದಾನ
ಫೆಬ್ರವರಿ 23 – 4ನೇ ಹಂತದ ಮತದಾನ
ಫೆಬ್ರವರಿ 27 – 5ನೇ ಹಂತದ ಮತದಾನ
ಮಾರ್ಚ್ 3 – 6ನೇ ಹಂತದ ಮತದಾನ
ಮಾರ್ಚ್ 7 – 7ನೇ ಹಂತದ ಮತದಾನ
ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ
ಕೋವಿಡ್ ಭೀತಿ ಹಿನ್ನೆಲೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮತದಾನ ಅವಧಿ 1 ಗಂಟೆ ವಿಸ್ತರಿಸಲಾಗುವುದು. ಯಾವುದೇ ರೋಡ್ ಶೋ, ಪಾದಯಾತ್ರೆಗಳು, ಸೈಕಲ್ ಅಥವಾ ಬೈಕ್ ಜಾಥಾಗಳು ಮತ್ತು ಮೆರವಣಿಗೆಗಳನ್ನು ನಡೆಸಬಾರದು ಎಂದು ಚುನಾವಣಾ ಆಯೋಗ ಹೇಳಿದ್ದು, ಜನವರಿ 15ರ ನಂತರ ಪರಿಸ್ಥಿತಿಗಳನ್ನ ಪರಿಶೀಲಿಸಿ, ಹೊಸ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.










