ನವದೆಹಲಿ : ಇಂದಿನಿಂದ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಆರಂಭವಾಗಲಿದೆ. ಆರೋಗ್ಯ ಸಿಬ್ಬಂದಿ, ಕೋವಿಡ್ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಿಕೆ ಆರಂಭವಾಗಲಿದೆ.
ಡಿಸೆಂಬರ್25 ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 15-18 ವರ್ಷದ ಮಕ್ಕಳು ಹಾಗೂ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಇಂದಿನಿಂದ ಬೂಸ್ಟರ್ ಡೋಸ್ ಲಸಿಕೆ ನೀಡಿಕೆಗೆ ಚಾಲನೆ ಸಿಗಲಿದೆ. ಶನಿವಾರದಿಂದಲೇ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಕೂಡಾ ಆರಂಭವಾಗಿದೆ. ಲಸಿಕಾ ಕೇಂದ್ರಗಳಲ್ಲಿ ನೇರವಾಗಿ ಬುಕ್ ಮಾಡಿಸಿ ಲಸಿಕೆ ಪಡೆಯಲು ಅವಕಾಶವಿದೆ.
ಲಸಿಕೆ ಪಡೆಯಲು ಯಾರೆಲ್ಲಾ ಅರ್ಹರು?
ವೈದ್ಯಕೀಯ ಸಿಬ್ಬಂದಿ, 60 ವರ್ಷ ಮೇಲ್ಪಟ್ಟ ಪೂರ್ವ ರೋಗಪೀಡಿತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಪಡೆದು 9 ತಿಂಗಳು ಅಥವಾ 39 ವಾರ ಆಗಿರಬೇಕು. ಅಂತಹವರು ಬೂಸ್ಟರ್ ಡೋಸ್‌ನ್ನು ಪಡೆಯಲು ಅರ್ಹರಾಗಿರುತ್ತಾರೆ.
ಬೂಸ್ಟರ್ ಡೋಸ್ ಗೆ ಯಾವ ಲಸಿಕೆ ನೀಡಲಾಗುತ್ತದೆ?
ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದವರು ಮೂರನೇ ಡೋಸ್ ಕೋವಿಶೀಲ್ಡ್ ಅನ್ನೇ ಪಡೆಯಬೇಕು. ಕೋವ್ಯಾಕ್ಸಿನ್ ಪಡೆದವರು ಮೂರನೇ ಡೋಸ್ಗೆ ಕೋವ್ಯಾಕ್ಸಿನ್ ಅನ್ನೇ ಪಡೆಯಬೇಕು.
60ವರ್ಷ ಮೇಲ್ಪಟ್ಟವರಿಗೆ ಸರ್ಟಿಫಿಕೇಟ್ ಬೇಕಾ?
60 ವರ್ಷ ಮೇಲ್ಪಟ್ಟು, ಇತರ ರೋಗಗಳಿಂದ ಬಳಲುತ್ತಿರುವವರು ಯಾವುದೇ ವೈದ್ಯರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸರ್ಟಿಫಿಕೇಟ್ ನ್ನು ಕೊಡಬೇಕಾಗಿಲ್ಲ. ಆದರೆ ಲಸಿಕೆ ಪಡೆಯುವುದಕ್ಕೂ ಮೊದಲು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರೊಂದಿಗೆ ಒಮ್ಮೆ ಸಮಾಲೋಚನೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಈಗಾಗಲೇ ಹೇಳಿಕೆ ನೀಡಿದೆ.










