ದೇಶದ ಹಿತದೃಷ್ಟಿಯಿಂದ ಶಿಕ್ಷಕರು ಮಕ್ಕಳನ್ನು ಸಚ್ಛಾರಿತ್ರ್ಯವಂತರನ್ನಾಗಿ ರೂಪಿಸಬೇಕು : ಐ.ಬಿ.ಶಂಕರ್.

110
firstsuddi

ಚಿಕ್ಕಮಗಳೂರು : ದೇಶದ ಹಿತದೃಷ್ಟಿಯಿಂದ ಶಿಕ್ಷಕರು ಮಕ್ಕಳನ್ನು ಸಚ್ಛಾರಿತ್ರ್ಯವಂತರನ್ನಾಗಿ ರೂಪಿಸಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಸಲಹೆ ಮಾಡಿದರು.

ನಗರದ ಆಜಾದ್‍ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ನಡೆದ ಭಾರತ ಸೇವಾದಳ ಶಿಕ್ಷಕರ ತಾಲ್ಲೂಕು ಮಟ್ಟದ ಮಿಲಾಪ್ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಮ್ಮ ಮಕ್ಕಳು ಮತ್ತು ಯುವಜನತೆಯಲ್ಲಿ ದೇಶಪ್ರೇಮ, ರಾಷ್ಟ್ರಭಕ್ತಿ ಮನೆ ಮಾಡಿತ್ತು. ಅವರು ಸಚ್ಛಾರಿತ್ರ್ಯವಂತರಾಗಿದ್ದರು. ನವಭಾರತ ನಿರ್ಮಾಣದ ಕನಸು ಅವರಲ್ಲಿತ್ತು ಎಂದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ದುರಾದೃಷ್ಟವಶಾತ್ ನಮ್ಮ ಮಕ್ಕಳು ಮತ್ತು ಯುವಜನತೆಯಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮರೆಯಾಗಿವೆ. ಸನ್ನಡತೆಯಿಂದ ಅವರು ದೂರವಾಗಿದ್ದಾರೆ. ಇದರ ಪರಿಣಾಮವಾಗಿ ಎಲ್ಲೆಡೆ ಅಪರಾಧ ಪ್ರಕರಣ, ಭ್ರಷ್ಟಚಾರ ತಾಂಡವವಾಡುತ್ತಿವೆ. ಇದು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ವಿಷಾಧಿಸಿದರು.

ಶಿಕ್ಷಕರು ಈ ದೇಶದ ರೂವಾರಿಗಳು ಅವರು ಮನಸ್ಸು ಮಾಡಿದರೆ ನವಭಾರತದ ನಿರ್ಮಾಣ ಸಾಧ್ಯವಾಗುತ್ತದೆ ಹಾಗಾಗಿ ಶಿಕ್ಷಕರು ಪಠ್ಯದ ಜೊತೆ ಜೊತೆಗೆ ಮಕ್ಕಳಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಮತ್ತು ಶಿಸ್ತನ್ನು ಬೆಳೆಸಬೇಕು. ಅವರನ್ನು ಸಚ್ಛಾರಿತ್ರ್ಯವಂತರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೋಮಶೇಖರ್, ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಸೇವಾದಳದ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ, ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿದರು. ರಾಷ್ಟ್ರೀಯತೆಯ ಕುರಿತು ಶಿಕ್ಷಕ ಚಂದ್ರಶೇಖರ್ ಉಪನ್ಯಾಸ ನೀಡಿದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶಪ್ಪ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್, ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್, ಶಿಕ್ಷಕರಾದ ಶಂಕರೇಗೌಡ, ರುದ್ರಪ್ಪ, ಶಿವಕುಮಾರ್ ಉಪಸ್ಥಿತರಿದ್ದರು.