ಲಕ್ನೋ : ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೋರಖ್ ಪುರ್ ಕ್ಷೇತ್ರದಿಂದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಕಣಕ್ಕಿಳಿಯಲಿದ್ದಾರೆ.
ಇದು ಚಂದ್ರಶೇಖರ್ ಆಜಾದ್ ಅವರ ಮೊದಲ ಚುನಾವಣೆ. 34 ವರ್ಷದ ಆಜಾದ್ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಹಿಂದೆ ಸರಿದಿದ್ದರು. ಆ ಸಮಯದಲ್ಲಿ ತನಗೆ ಯಾವುದೇ ಪಕ್ಷವಿಲ್ಲದ ಕಾರಣ ಮಾಯಾವತಿ ಅವರ ಪಕ್ಷ ಮತ್ತು ಕಾಂಗ್ರೆಸ್ ಗೆ ಬೆಂಬಲ ನೀಡುವುದು ಉತ್ತಮ ಎಂದು ಹೇಳಿದ್ದರು. ಈಗ ಅವರ ಬಳಿ ಪಕ್ಷ ಇರುವುದರಿಂದ ಯೋಗಿ ಆದಿತ್ಯನಾಥ ವಿರುದ್ಧ ಸ್ಪರ್ಧಿಸುವುದಾಗಿ ಅಜಾದ್ ಹೇಳಿದ್ದಾರೆ.
ಸಿಎಂ ವಿರುದ್ಧ ಗೋರಖ್ ಪುರದಲ್ಲಿ ಕಣಕ್ಕಿಳಿಯುವ ಸಂಬಂಧ ಪ್ರತಿಕ್ರಿಯಿಸಿರುವ ಆಜಾದ್, ನನಗೆ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಆದರೆ ಯೋಗಿ ಆದಿತ್ಯನಾಥ್ ಅವರನ್ನು ಸೋಲಿಸುವುದು ಮುಖ್ಯ. ಹೀಗಾಗಿ ಅವರು ಎಲ್ಲೆಲ್ಲಿ ಸ್ಪರ್ಧಿಸುತ್ತಾರೋ ಅಲ್ಲಿ ನಾನೂ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರೆ.










