ಇಸ್ಲಾಮಾಬಾದ್ : ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯ ಚಿತ್ರಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ ಆರೋಪದ ಮೇಲೆ ಮಹಿಳೆಯೊಬ್ಬರಿಗೆ ಪಾಕಿಸ್ತಾನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2020ರಲ್ಲಿ ಫಾರೂಕ್ ಹಸನಾತ್ ಎಂಬಾತ ಮಹಿಳೆ ಅನಿಕಾ ಅಟಿಕ್ ಎಂಬಾಕೆಯ ಮೇಲೆ ಧರ್ಮನಿಂದನೆಯ ಆರೋಪ ಮಾಡಿದ್ದ. ಇದೀಗ ಆರೋಪ ಸಾಬೀತಾಗಿದ್ದು ಕೋರ್ಟ್ ದೋಷಿ ಎಂದು ತೀರ್ಪು ನೀಡಿದೆ.
ಅನಿಕಾ ಹಾಗೂ ಫಾರೂಕ್ ಸ್ನೇಹಿತರಾಗಿದ್ದರು. ಆದರೆ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದು, ನಂತರ ಅನಿಕಾ ವಾಟ್ಸಪ್ ನಲ್ಲಿ ಧರ್ಮನಿಂದನೆಯ ಸಂದೇಶವನ್ನು ಫಾರೂಕ್ ಗೆ ಕಳುಹಿಸಿದ್ದಳು. ಫಾರೂಕ್ ಅನಿಕಾಳ ಸಂದೇಶವನ್ನು ಅಳಿಸುವಂತೆ ಹಾಗೂ ಕ್ಷಮೆ ಯಾಚಿಸುವಂತೆ ಹೇಳಿದ್ದ. ಆದರೆ ಅನಿಕಾ ನಿರಾಕರಿಸಿದ್ದರಿಂದ ಫಾರೂಕ್ ಆಕೆಯ ಮೇಲೆ ಕೇಸ್ ದಾಖಲಿಸಿದ್ದರು. ಪೊಲೀಸರು ಆಕೆಯ ಮೇಲೆ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆಗೆ ಅನಿಕಾಳನ್ನು ಬಂಧಿಸಿದ್ದರು. ಆದರೆ ಅನಿಕಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಳು.
ಧರ್ಮನಿಂದನೆಯ ವಿಚಾರವಾಗಿ ಪಾಕಿಸ್ತಾನದಲ್ಲಿ ಯಾರನ್ನೂ ಇಲ್ಲಿಯವರೆಗೆ ಗಲ್ಲಿಗೇರಿಸಿಲ್ಲ. ಆದರೆ ಆರೋಪ ಹೊತ್ತ ಹಲವರು ಹತ್ಯೆಯಾಗಿದ್ದಾರೆ.










