ಕಾಂಗ್ರೆಸ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ…

76
firstsuddi

ಮೈಸೂರು : ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನ ಕರೆ ತರುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ನವರು ನಮಗೆ ವಿದೇಶಾಂಗ ನೀತಿಯ ಬಗ್ಗೆ ಪಾಠ ಹೇಳುತ್ತಿದ್ದಾರೆ. ಅವರ ಆಡಳಿತದ ವಿದೇಶಾಂಗ ನೀತಿ ಹೇಗಿತ್ತು?, ಅದರಿಂದ ದೇಶಕ್ಕಾದ ನಷ್ಟವೆಷ್ಟು? ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಚೀನಾ ಟಿಬೆಟ್ ಕಬಳಿಸಿದಾಗ ಸುಮ್ಮನೆ ಇದ್ದ ಕಾಂಗ್ರೆಸ್ ಈಗ ನಮಗೆ ವಿದೇಶಾಂಗ ನೀತಿಯ ಪಾಠ ಹೇಳುತ್ತಿದೆ. ಕಾಂಗ್ರೆಸ್ನವರಿಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ ಎಂದು ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ವಿರೋಧ ನಾವು ಹೋಗಲು ಕಷ್ಟವಿದೆ. ತನ್ನ ಭದ್ರತೆ, ಸುರಕ್ಷತೆ ದೃಷ್ಟಿಕೋನದಲ್ಲಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದೆ. ರಷ್ಯಾದ ಮೇಲೆ ಭಾರತ ಅತಿ ಹೆಚ್ಚು ಅವಲಂಬಿತವಾಗಿದೆ. ಈ ಅವಲಂಬನೆಗೆ ಸೃಷ್ಟಿಸಿದ್ದು ಕಾಂಗ್ರೆಸ್. ರಷ್ಯಾವನ್ನು ಎದುರು ಹಾಕಿಕೊಂಡರೆ ಮುಂದೆ ನಮಗೆ ಯುದ್ಧದಂತಹ ಸಂದರ್ಭ ಸೃಷ್ಟಿಯಾದರೆ ರಷ್ಯಾ ನಮ್ಮ ನೆರವಿಗೆ ಬರುವುದು ಕಷ್ಟ. ಹೀಗಾಗಿ ಪ್ರಧಾನಿಗಳು ತಟಸ್ಥ ನಿಲುವಿಗೆ ಬಂದಿದ್ದಾರೆ. ಅಲ್ಲಿನ ಎಲ್ಲಾ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ವ್ಯವಸ್ಥಿತವಾಗಿ ಸಾಗಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಬ್ಯಾನ್ ಕ್ಯಾಂಪೈನ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀಟ್ ಪರೀಕ್ಷೆಯನ್ನ ನ್ಯಾಯಾಲಯದ ಆದೇಶದ ಅನುಗುಣವಾಗಿಯೇ ತರಲಾಗಿದ್ದು, 138 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ಉಕ್ರೇನಲ್ಲಿ ವೈದ್ಯಕೀಯ ವ್ಯಾಸಂಗ ಮಾಡಲು ಹೋಗುವವರು ಸಹ ಬುದ್ಧಿವಂತರೇ ಎಂದು ಸಂಸದರು ಹೇಳಿದರು.

ನವೀನ್ ಸಾವಿನ ಹಿನ್ನೆಲೆಯಲ್ಲಿ ಕೆಲವರು ಮೀಸಲಾತಿ ವಿರುದ್ಧ ಮಾತಾಡುತ್ತಿದ್ದಾರೆ. ಪ.ಜಾತಿ, ಪ. ಪಂಗಡ ಎಷ್ಟೋ ವರ್ಷ ಶೋಷಣೆಗೆ ಒಳಗಾಗಿದೆ. ಅವರಿಗೆ ಮೀಸಲಾತಿ ಕೊಟ್ಟಿರುವುದರಲ್ಲಿ ಯಾವ ತಪ್ಪು ಇಲ್ಲ. ಜಾತಿ ತಾರತಮ್ಯ ನಿವಾರಣೆಯಾಗಿ ಸಮಾಜ ಜಾತಿ ಬಂಧನದಿಂದ ಹೊರ ಬರುವವರೆಗೂ ಮೀಸಲಾತಿ ಇರುತ್ತೆ. ಮೀಸಲಾತಿ ಇವತ್ತು ಇರುತ್ತೆ ಮುಂದೆಯೂ ಇರುತ್ತೆ ಎಂದರು.