ಆಂಧ್ರದ ಶ್ರೀಶೈಲದಲ್ಲಿ ಸ್ಥಳೀಯರು, ಕನ್ನಡಿಗರ ನಡುವೆ ಘರ್ಷಣೆ – ನೂರಾರು ವಾಹನ ಜಖಂ…

66
firstsuddi

ಅಮರಾವತಿ : ಆಂಧ್ರಪ್ರದೇಶದ ಶ್ರೀಶೈಲದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಕರ್ನಾಟಕದಿಂದ ತೆರಳಿದ್ದ ಭಕ್ತರು ಮತ್ತು ಸ್ಥಳೀಯರ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ನೂರಾರು ವಾಹನಗಳನ್ನು ಧ್ವಂಸಗೊಳಿಸಲಾಗಿದೆ.

ದೇವಸ್ಥಾನದ ಆವರಣದಲ್ಲಿ ನೀರಿನ ಬಾಟಲ್ ಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಗಲಾಟೆಯಲ್ಲಿ ಬಾಗಲಕೋಟೆ ಮೂಲದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಕರ್ನಾಟಕ ಮೂಲದ ಅಂದಾಜು 200 ವಾಹನಗಳ ಗ್ಲಾಸ್ ಗಳು ಜಖಂಗೊಂಡಿವೆ. ಕರ್ನಾಟಕ ಮೂಲದ ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಯಚೂರು, ಬಾಗಲಕೋಟೆ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳ ಭಕ್ತರು ದೇವಸ್ಥಾನಕ್ಕೆ ತೆರಳಿದ್ದರು. ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಭಕ್ತರು ಹಾಗು ವ್ಯಾಪಾರಿಗಳ ನಡುವೆ ಶುರುವಾಗಿದ್ದ ಜಗಳ ತಾರಕಕ್ಕೇರಿ ಸ್ಥಳೀಯರಿಂದ ಭಕ್ತರ ಜೊತೆ ಹೊಡೆದಾಟ ನಡೆದಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಸದ್ಯ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡ ಸ್ಥಳೀಯ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.