ನವದೆಹಲಿ : ಪೆಟ್ರೋಲ್-ಡೀಸೆಲ್ ದರ ಏರಿಕೆ ಬೆನ್ನಲ್ಲೇ ಇದೀಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಕೆಯಾಗಿದೆ. ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 250 ರೂ ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ ಇದೇ ಮೊದಲಬಾರಿಗೆ 250 ರೂ. ಏರಿಕೆಯಾಗಿರುವುದು ಕಂಡುಬಂದಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರ 105 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಏರಿಕೆಯಾಗಿದೆ. ಇಂದಿನಿಂದಲೇ ಬೆಲೆ ಹೆಚ್ಚಳವಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ 19 ಕೆಜಿ ಸಿಲಿಂಡರ್ ನ ಬೆಲೆ ಪ್ರತಿ ಯೂನಿಟ್ ಗೆ 2,253 ರೂ., ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 2,351 ರೂ., ಮುಂಬೈ ಮತ್ತು ಚೆನ್ನೈನಲ್ಲಿ, ಕ್ರಮವಾಗಿ ರೂ 2,205 ಮತ್ತು 2,406 ಬೆಲೆಗೆ ಮಾರಾಟವಾಗುತ್ತಿದೆ.
ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಗಣನೀಯವಾದ ಹೆಚ್ಚಳ ಕಂಡು ಬರುತ್ತಿರುವ ಕಾರಣ ಅನಿಲ ಬೆಲೆ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಅಡುಗೆ ಅನಿಲ ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.










