ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು – ಬೊಮ್ಮಾಯಿ ಘೋಷಣೆ…

69
firsuddi

ತುಮಕೂರು : ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಿದ್ಧಗಂಗಾ ಶ್ರೀಗಳ ಹೆಸರಿಡುವ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನೋತ್ಸವ ಹಿನ್ನೆಲೆ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದವರು ಶ್ರೀಗಳು. ಶ್ರೀಗಳ ಧ್ಯೇಯ ಶ್ರದ್ಧೆ, ನಿಷ್ಠೆ, ಪರಿಶ್ರಮವನ್ನು ನಾವು ಪರಿಪಾಲನೆ ಮಾಡಬೇಕು. ನಾನು ಭಕ್ತನಾಗಿ ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಶಿವಕುಮಾರ್ ಶ್ರೀಗಳ ಪರಂಪರೆಯನ್ನು ಕಿರಿಯ ಶ್ರೀಗಳು ಮುಂದುವರಿಸುತ್ತಿದ್ದಾರೆ. 88 ವರ್ಷ ಈ ನಾಡಿಗೆ ಸಿದ್ದಗಂಗಾ ಶ್ರೀಗಳು ಸೇವೆ ಸಲ್ಲಿಸಿದ್ದಾರೆ. ಇಡೀ ದೇಶದಲ್ಲಿ ಯಾರೂ ಈ ಸೇವೆ ಮಾಡಿರಲಿಲ್ಲ. ಅದಕ್ಕಾಗಿಯೇ ಅವರನ್ನು ನಡೆದಾಡುವ ದೇವರು ಎನ್ನುತ್ತೇವೆ. ಅವರು ಹಚ್ಚಿದ ಹೊಲೆಯ ಕಿಚ್ಚು ಬಡವರ ಹಸಿವಿನ ಕಿಚ್ಚು ನಿಗಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ಎಂಬುದನ್ನು ಪಾಲಿಸಿದವರು ಸಿದ್ದಗಂಗಾ ಶ್ರೀಗಳು ಎಂದು ಸ್ಮರಿಸಿದರು.

ಎಲ್ಲಾ ಸಮುದಾಯದವರನ್ನು ಸೇರಿಸಿ ತ್ರಿವಿಧ ದಾಸೋಹ ಮಾಡಿದ ಸಿದ್ದಗಂಗಾ ಶ್ರೀಗಳ ಸ್ಮರಣಾರ್ಥ ಏಪ್ರಿಲ್‌ 1 ಅನ್ನು ದಾಸೋಹ ದಿನವೆಂದೂ, ಸರ್ಕಾರಿ ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ಡಾ. ಶಿವಕುಮಾರ ಸ್ವಾಮೀಜಿ ಬಿಸಿಯೂಟ ಯೋಜನೆ ಎಂದು ಹೆಸರಿಡಲಾಗುವುದು. ಇಂದು ಕೂಡಾ ಸಿದ್ದಗಂಗಾ ಶ್ರೀಗಳು ನಮ್ಮ ಜೊತೆ ಇದ್ದಾರೆ. ಅವರು ಲಿಂಗೈಕ್ಯರಾಗಿದ್ದಾರೆ ಅಂತ ನಾನು ಹೇಳುವುದಿಲ್ಲ. ಅವರು ನಮ್ಮ ಜೊತೆ ಇರುತ್ತಾರೆ. ಅವರ ನಡೆ ನಮಗೆ ದಾರಿದೀಪ ಆಗುತ್ತದೆ. ಬದುಕಿನ ದಾರಿ ತೋರಿಸಿದವರು ಸಿದ್ದಗಂಗಾ ಶ್ರೀಗಳು ಎಂದು ತಿಳಿಸಿದರು.