ಯಾವುದೇ ಕಾರಣಕ್ಕೂ ನಿಮ್ಮಲ್ಲಿರುವ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ : ವಿದ್ಯಾರ್ಥಿಗಳಿಗೆ ಮೋದಿ ಸಲಹೆ…

70
firstsuddi

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪರೀಕ್ಷಾ ಪೇ ಚರ್ಚಾದ ಐದನೇ ಆವೃತ್ತಿಯನ್ನು ನಡೆಸಿಕೊಟ್ಟರು. ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು. ಯಾವುದೇ ಕಾರಣಕ್ಕೂ ನಿಮ್ಮಲ್ಲಿರುವ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಲಿ ಎಂದರು.

ಪರೀಕ್ಷೆಗಳಿಂದ ಯಾವುದೇ ಕಾರಣಕ್ಕೂ ಹೆದರಬೇಡಿ. ಅವುಗಳೊಂದಿಗೆ ಮಾತನಾಡಿ. ಪರೀಕ್ಷೆಗಳೇ ನಿಮಗೆ ಹೆದರಬೇಕು, ಆ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಉದ್ವೇಗಕ್ಕೆ ಒಳಗಾಗುವುದನ್ನು ಅಭ್ಯಾಸ ಮಾಡಬೇಡಿ. ಸರಳ ರೀತಿಯಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಿ. ಪ್ರತಿದಿನ ಓದುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ. ನಿಮ್ಮನ್ನು ನೀವು ಮೊದಲು ಅರ್ಥೈಸಿಕೊಳ್ಳಿ. ನಿಮಗೆ ಆಸಕ್ತಿ ಇರುವ ಕೋರ್ಸ್ ಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ. ಓದುವುದರ ಜೊತೆಗೆ ಕ್ರೀಡೆಯ ಕಡೆಗೆ ಗಮನ ಹರಿಸಿ, ಅನೇಕ ವಿಷಯಗಳು ನಿಮಗೆ ಮೈದಾನದಿಂದಲೇ ಗೊತ್ತಾಗುತ್ತವೆ ಎಂದರು.

ಇದೇ ವೇಳೆ ಕೋವಿಡ್ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಆನ್ ಲೈನ್ ಶಿಕ್ಷಣದ ವ್ಯಾಪಕ ಬಳಕೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಗಳು, ಜ್ಞಾನವನ್ನು ಪಡೆಯಲು ಆನ್ಲೈನ್ ಶಿಕ್ಷಣ ಸಹಕಾರಿಯಾಗಿದೆ. ಆದರೆ, ಆಫ್ ಲೈನ್ ಶಿಕ್ಷಣವು ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗುತ್ತದೆ. ‘ಆಫ್ ಲೈನ್ನಲ್ಲಿ ಏನಾಗುತ್ತದೆಯೋ ಅದೇ ಆನ್ ಲೈನ್ ನಲ್ಲೂ ನಡೆಯುತ್ತದೆ. ನಮಗೆ ಕಲಿಕೆಯ ಮಾಧ್ಯಮವು ಸಮಸ್ಯೆಯಾಗಬಾರದು. ನಮ್ಮ ಮನಸ್ಸು ವಿಷಯದೊಳಗೆ ಮುಳುಗಿದರೆ, ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ’ ಎಂದು ತಿಳಿಸಿದರು.

ತಮ್ಮ ಕನಸುಗಳಿಗೋಸ್ಕರ ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕಬಾರದು. ಭವಿಷ್ಯದ ಬಗ್ಗೆ ಮುಕ್ತರಾಗಿ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ನೀಡಬೇಕು. ನಿಮ್ಮ ನಿರೀಕ್ಷೆಗಳು ಈಡೇರದ ಕಾರಣ ಅವುಗಳನ್ನು ಮಕ್ಕಳ ಮೇಲೆ ಹಾಕುವುದು ಸರಿಯಲ್ಲ. ಪ್ರತಿಯೊಂದು ಮಗುವಿನಲ್ಲೂ ವಿಶಿಷ್ಟವಾದ ಪ್ರತಿಭೆ ಇದ್ದೇ ಇರುತ್ತದೆ. ಅವುಗಳನ್ನು ಹುಡುಕುವ ಕೆಲಸವಾಗಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮದಲ್ಲಿ ಕರ್ನಾಟಕದ 60 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.