ಚಿಕನ್ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ – ಇಬ್ಬರು ರೌಡಿಶೀಟರ್​ಗಳು ಅರೆಸ್ಟ್…

70
firstsuddi

ಮಂಗಳೂರು : ನಗರದ ವೆಲೆನ್ಶಿಯಾ ಜಂಕ್ಷನ್ ಬಳಿಯ ಚಿಕನ್ ಅಂಗಡಿಯ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ರೌಡಿಶೀಟರ್ ಗಳನ್ನು ಮಂಗಳೂರಿನ ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ಪ್ರೀತಮ್ ಪೂಜಾರಿ (27) ಮತ್ತು ಎಕ್ಕೂರು ನಿವಾಸಿ ಧೀರು ಯಾನೆ ಧೀರಜ್ ಕುಮಾರ್ ( 25 ) ಬಂಧಿತರು. ನಿನ್ನೆ ಸಂಜೆ 6.30ಕ್ಕೆ ವೆಲೆನ್ಶಿಯಾ ಜಂಕ್ಷನ್ ಬಳಿಯ ಐಡಿಯಲ್ ಚಿಕನ್ ಅಂಗಡಿಯ ಮುಂಭಾಗದಲ್ಲಿ ಆರೋಪಿಗಳಿಬ್ಬರು ಸಾರ್ವಜನಿಕನೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದರು. ಇದನ್ನು ಅಂಗಡಿ ಸಿಬ್ಬಂದಿಗಳು ಪ್ರಶ್ನಿಸಿದಾಗ ಆರೋಪಿಗಳು ಅಂಗಡಿ ಸಿಬ್ಬಂದಿಗಳಾದ ಸುನಿಲ್ ಮಾರ್ಡಿ, ಅನಂತ ಮತ್ತು ಜೀವನ್ ಎಂಬವರಿಗೆ ಹೆಲ್ಮೆಟ್, ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ. ನಂತರ ಸಿಬ್ಬಂದಿಗೆ ಚೂರಿಯಿಂದ ಇರಿಯಲು ಹೋದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ತಡೆದಿದ್ದಾರೆ. ಅಲ್ಲದೇ ಆರೋಪಿಗಳು ಸಾರ್ವಜನಿಕರಿಗೂ ಚೂರಿ ತೋರಿಸಿ ತಿವಿಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆ ನಡೆಸಿದಾಗ, ಮದ್ಯ ಸೇವನೆ ಹಾಗೂ ಗಾಂಜಾ ಸೇವನೆ ಮಾಡಿರುವುದು ತಿಳಿದು ಬಂದಿದೆ.