ಅತ್ಯಾಚಾರ ಕೇಸ್ ದಾಖಲಿಸಲು ಠಾಣೆಗೆ ಹೋದ ಬಾಲಕಿ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ರೇಪ್!

74
firstsuddi

ಲಕ್ನೋ ; ಅತ್ಯಾಚಾರ ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದ 13 ವರ್ಷದ ಬಾಲಕಿ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಮತ್ತೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ. ತನ್ನ ಮೇಲೆ ನಾಲ್ವರು ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ದೂರು ನೀಡಲು ತನ್ನ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದಳು. ಈ ವೇಳೆ ಠಾಣಾಧಿಕಾರಿ ತಿಲಕ್ ಧಾರಿ ಸರೋಜ್ ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ನಾಲ್ವರು ಆರೋಪಿಗಳು ಬಾಲಕಿಯನ್ನು ಅಪಹರಿಸಿ ಏ.22ರಂದು ಭೋಪಾಲ್ ಗೆ ಕರೆದೊಯ್ದಿದ್ದರು. ಈ ವೇಳೆ ನಾಲ್ಕು ದಿನಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಆಕೆಯನ್ನು ಗ್ರಾಮಕ್ಕೆ ಕರೆತಂದು ಪೊಲೀಸ್ ಠಾಣೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಬಾಲಕಿಯನ್ನು ಪೊಲೀಸರು ಆಕೆಯ ಚಿಕ್ಕಮ್ಮನಿಗೆ ಒಪ್ಪಿಸಿದ್ದಾರೆ.

ಮಾರನೇ ದಿನ ಸಂತ್ರಸ್ತೆಯಿಂದ ಹೇಳಿಕೆ ಪಡೆಯಲು ಠಾಣೆಗೆ ಬರುವಂತೆ ಪೊಲೀಸರು ತಿಳಿಸಿದ್ದಾರೆ. ಚಿಕ್ಕಮ್ಮನೊಂದಿಗೆ ಠಾಣೆಗೆ ಬಂದ ಸಂತ್ರಸ್ತೆಯನ್ನು ಠಾಣೆಯ ಉಸ್ತುವಾರಿ ವಹಿಸಿದ್ದ ಸಿಬ್ಬಂದಿ ಕೋಣೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ತನ್ನ ಕಣ್ಣೇದುರೇ ಇಷ್ಟೆಲ್ಲಾ ನಡೆದರೂ ಚಿಕ್ಕಮ್ಮ ಸುಮ್ಮನೇ ಇದ್ದಳು. ಹೀಗಾಗಿ ಆಕೆಯ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಆರೋಪಿ ಠಾಣಾಧಿಕಾರಿ ತಿಲಕ್ ಧಾರಿ ಸರೋಜ್ ನನ್ನು ಅಮಾನತುಗೊಳಿಸಲಾಗಿದೆ. ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ನಾಪತ್ತೆಯಾಗಿರುವ ಆತನ ಪತ್ತೆಗಾಗಿ ಮೂವರ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ರಚಿಸಲಾಗಿದೆ. ಹಾಗೇ, ಮೊದಲು ಬಾಲಕಿ ಮೇಲೆ ಅತ್ಯಾಚಾರ ಮಾಡಿದ ನಾಲ್ವರಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಲಲಿತಪುರದ ಉನ್ನತ ಪೊಲೀಸ್ ಅಧಿಕಾರಿ ನಿಖಿಲ್ ಪಾಠಕ್ ತಿಳಿಸಿದ್ದಾರೆ.