ಚಿಕ್ಕಮಗಳೂರು : ಭಾರತ ಸೇವಾದಳದ ಸಂಸ್ಥಾಪಕ, ಅಪ್ರತಿಮ ದೇಶಭಕ್ತ ನಾ.ಸು.ಹರ್ಡಿಕರ್ ಅವರ ತ್ಯಾಗ, ದೇಶಸೇವೆ ಮತ್ತು ಆದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಬೇಕು ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕುಂದೂರು ಅಶೋಕ್ ಸಲಹೆ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇಂದು ನಡೆದ ಭಾರತ ಸೇವಾದಳದ ಸಂಸ್ಥಾಪಕ ನಾ.ಸು.ಹರ್ಡಿಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆ ಸೈದ್ದಾಂತಿಕ ಭ್ರಮೆಯಲ್ಲಿದ್ದಾರೆ, ಪಕ್ಷ, ಜಾತಿ, ಧರ್ಮದ ಸೇವೆಯನ್ನೇ ನಿಜವಾದ ದೇಶಭಕ್ತಿಯೆಂದು ಭಾವಿಸಿದ್ದಾರೆ ಎಂದು ವಿಷಾದಿಸಿದ ಅವರು ಯುವಜನತೆ ಆ ಅಮಲಿನಿಂದ ಹೊರಬರಬೇಕು, ನಾ.ಸು.ಹರ್ಡಿಕರ್ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು, ಹರ್ಡಿಕರ್ ಅವರ ಆದರ್ಶಗಳ ಬೆಳಕಿನಡಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ನಾ.ಸು.ಹರ್ಡಿಕರ್ ಅವರು ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ದೇಶಕ್ಕಾಗಿ ಹೋರಾಟ ನಡೆಸಿದ ತಮ್ಮ ಬದುಕನ್ನೇ ತ್ಯಾಗ ಮಾಡಿದ ಮಹಾತ್ಮರು ಎಂದರು.
ವಿದೇಶದಲ್ಲಿ ವೈದ್ಯರಾಗಿದ್ದ ನಾ.ಸು.ಹರ್ಡಿಕರ್ ಅವರು ವೃತ್ತಿಯನ್ನು ತ್ಯಜಿಸಿ ದೇಶದ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದು, ಭಾರತಸೇವಾದಳವನ್ನು ಸ್ಥಾಪಿಸಿ ಅದರ ಮೂಲಕ 2 ಲಕ್ಷಕ್ಕೂ ಹೆಚ್ಚು ಯುವಕರನ್ನು ಸ್ವಾತಂತ್ರ್ಯ ಸೇನಾನಿಗಳನ್ನಾಗಿ ಮಾಡಿ ದೇಶ ಸೇವೆಗೆ ನೀಡಿದ್ದನ್ನು ಇಂದಿನ ಯುವಜನತೆ ಸ್ಮರಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲು ಸಾಧ್ಯವಿಲ್ಲ ಎಂಬುದನ್ನು ಇಂದಿನ ಯುವಜನತೆ ಮನಗಾಣಬೇಕು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರ ಚರಿತ್ರೆಯನ್ನು ಅವಲೋಕನ ಮಾಡಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಾ.ಸು.ಹರ್ಡಿಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು, ನಿವೃತ್ತ ಪಶು ವೈಧ್ಯಾಧಿಕಾರಿ ರಾಮಚಂದ್ರಮೂರ್ತಿ, ರಾಘವೇಂದ್ರ ಉಪಸ್ಥಿತರಿದ್ದರು.










