ಮೂರನೇ ಮಗು ಮಾಡಿಕೊಂಡರೆ 11 ಲಕ್ಷ ರೂ ಬಹುಮಾನ ; ದಂಪತಿಗೆ ಖಾಸಗಿ ಕಂಪನಿಯಿಂದ ಆಫರ್…

85
firstsuddi

ಬೀಜಿಂಗ್. : ಚೀನಾದಲ್ಲಿ ಜನಸಂಖ್ಯಾ ಅಭಿವೃದ್ಧಿ ದರ ಬಹುತೇಕ ಶೂನ್ಯಕ್ಕೆ ತಲುಪಿದೆ. ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಿದೆ. ಇದನ್ನು ತಡೆಗಟ್ಟಲು ಚೀನಾ ಸರ್ಕಾರ ಜನಸಂಖ್ಯೆ ಏರಿಕೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಇದೀಗ ಮೂರನೇ ಮಗು ಪಡೆದರೆ ದಂಪತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಖಾಸಗಿ ಕಂಪನಿಯೊಂದು ಆಫರ್ ಕೊಟ್ಟಿದೆ.

ಬೀಜಿಂಗ್ ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಕಂಪನಿಯೊಂದು ತಮ್ಮಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಆಫರ್ ನೀಡಿದೆ. ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ ಬರೋಬ್ಬರಿ 90,000 ಯುವಾನ್ (11 ಲಕ್ಷ ರೂ.) ಪ್ರೋತ್ಸಾಹ ಧನ ನೀಡಲಾಗುವುದು ಎಂದು ಆಫರ್ ನೀಡಿದೆ.

ಅಷ್ಟೇ ಅಲ್ಲ, ಆಕರ್ಷಕ ರಜೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳು 3ನೇ ಮಗು ಪಡೆದರೆ ಒಂದು ವರ್ಷ ವೇತನ ಸಹಿತ ರಜೆ ನೀಡುತ್ತದೆ. ಇನ್ನು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ವೇತನ ಸಹಿತ ರಜೆಯನ್ನು ಕೂಡಾ ನೀಡುತ್ತಿದೆ. ಮೂರನೇ ಮಗುವಿಗೆ ಮಾತ್ರವಲ್ಲದೇ ಎರಡನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗೆ 60,000 ಯುವಾನ್ (7 ಲಕ್ಷ ರೂ.) ಮತ್ತು ಮೊದಲ ಮಗುವಿಗೆ ಜನ್ಮ ನೀಡಿದರೆ 30,000 ಯುವಾನ್ (3.50 ಲಕ್ಷ ರೂ.) ನೀಡುವುದಾಗಿ ಘೋಷಿಸಿದೆ.

ಚೀನಾದಲ್ಲಿ ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು 1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತರಲಾಗಿತ್ತು. ಆದರೆ ಜನಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಮೇ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು.