ಕೇಳುಗರ ಮನಗೆದ್ದ ‘ಶಾಂಕರ ಸ್ತೋತ್ರ ಗೀತಾ’ ಸಂಗೀತ ಕಾರ್ಯಕ್ರಮ…

94

ಚಿಕ್ಕಮಗಳೂರು : ಶಂಕರಜಯಂತಿ ಪ್ರಯುಕ್ತ ಬ್ರಾಹ್ಮಣ ಮಹಾಸಭಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ‘ಶಾಂಕರ ಸ್ತೋತ್ರ ಗೀತಾ’ ಸಂಗೀತ ಕಾರ್ಯಕ್ರಮ ಕೇಳುಗರ ಮನ ಗೆದ್ದಿತು.

ಝೀಟಿವಿ ಸರಿಗಮಪ ಖ್ಯಾತಿಯ ಮೈಸೂರಿನ ಯುವ ಪ್ರತಿಭೆ ಎಂ.ಆರ್.ಶ್ರೀಹರ್ಷ ಅವರ ಕಂಚಿನ ಕಂಠದ ಸುಮಧುರ, ಮನೋಜ್ಞ ಗಾಯನ ಸಭಿಕರನ್ನು ನಾಲ್ಕು ಗಂಟೆಗೂ ಅಧಿಕ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

ಸಾಮಾನ್ಯವಾಗಿ ಎಲ್ಲಾ ಸಂಗೀತ ಕಾರ್ಯಕ್ರಮಗಳಲ್ಲೂ ಗೀತೆಗಳನ್ನು ಬರೀಗಾಯನ ಮಾಡುವುದು ನಡೆದು ಬಂದಿರುವ ಪದ್ಧತಿ. ಆದರೆ ಶ್ರೀಹರ್ಷ ಅವರು ಸ್ತೋತ್ರಗಳನ್ನು, ಮಂತ್ರಗಳನ್ನು ಮತ್ತು ಹಾಡುಗಳನ್ನು ಹಾಡುವುದರ ಜೊತೆಗೆ ಅದರ ಭಾವಾರ್ಥ, ಇತಿಹಾಸಗಳನ್ನೂ ಸಭಿಕರ ಮುಂದೆ ತೆರೆದಿಟ್ಟರು.

ಗುರುವೇ ಪರಬ್ರಹ್ಮ ಎಂಬ ಗುರುಸ್ತೋತ್ರದೊಂದಿಗೆ ತಮ್ಮ ಗಾನಯಾನವನ್ನು ಆರಂಭಿಸಿದ ಶ್ರೀಹರ್ಷ,ಅದ್ವೈತ ಸಿದ್ಧಾಂತ ಪ್ರತಿಪಾದಕ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಕೃತಿಗಳನ್ನು ಮನೋಜ್ಞವಾಗಿ ಹಾಡುವುದರ ಜೊತೆಗೆ ಅವರ ಬದುಕು, ಸಾಧನೆ, ಸಂದೇಶ, ತತ್ವಗಳು ಮತ್ತು ಅವರ ಜೀವನದ ಪ್ರಮುಖ ಘಟನೆಗಳನ್ನು ವಿವರಿಸಿದರು.

ಪುರಂದರದಾಸರ ನಿಂದಾಸ್ತುತಿ ಯಾರು ಬದುಕಿದರಯ್ಯಾ ಹರಿ ನಿನ್ನ ನಂಬಿ, ಇನ್ನುದಯ ಬಾರದೆದಾಸನ ಮೇಲೆ, ಕನಕದಾಸರ ಚಕ್ರವಾಕರಾಗದ ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ, ಗೌಳಿರಾಗದ ಪ್ರಾತಃಸ್ಮರಣ ಸ್ತೋತ್ರ, ಶಂಕರಾಚಾರ್ಯರ ಆತ್ಮಷಟ್ಕಚಿದಾನಂದರೂಪಂ ಶಿವೋಹಂ ಶಿವೋಹಂ, ಸಂತ ಶಿಶುನಾಳ ಷರೀಫರ ಮರುಳೇ..ನೇಮದಿ ಮಾಡೋ ಶ್ರೀ ಶಿವಭಜನ ಕೃತಿಗಳ ಗಾಯನ ಕೇಳುಗರನ್ನು ಪರವಶಗೊಳಿಸಿತು.

ಪ್ರಾತಃಸ್ಮರಣ ಸ್ತೋತ್ರಗಳನ್ನು ಹಾಡುವುದರ ಜೊತೆಗೆ ಅದರ ಹಿಂದಿರುವ ವೈಜ್ಞಾನಿಕ ಕಾರಣಗಳು, ಪಠಣದಿಂದಾಗುವ ಲಾಭಗಳನ್ನೂ ವಿವರಿಸಿದ ಶ್ರೀಹರ್ಷ ಅವರ ಗಾಯನದಲ್ಲಿ ಮೂಡಿ ಬಂದ ಗುರುಪಾದುಕಾ ಸ್ತೋತ್ರ ಸಭೆಯಲ್ಲಿ ಸಂಚಲನ ಮೂಡಿಸುವುದರ ಜೊತೆಗೆ ಭಕ್ತಿಯ ತರಂಗಗಳನ್ನೆಬ್ಬಿಸಿ ಸಭಿಕರೂ ಹಾಡಿಗೆದನಿಗೂಡಿಸುವಂತೆ ಮಾಡಿದ್ದು ವಿಶೇಷವಾಗಿತ್ತು.

ಹಿರಿಯ ಗಮಕಿ ಕೆ.ವಿ.ಚಂದ್ರಮೌಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸಂಸ್ಕಾರ ಭಾರತಿಯಅಧ್ಯಕ್ಷ ನಾಯಕ್ ಸಚ್ಚಿದಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯುವ ಪ್ರತಿಭೆ, ಗಾಯಕ ಎಂ.ಆರ್.ಶ್ರೀಹರ್ಷ ಮತ್ತು ಸಹ ಕಲಾವಿದರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಲಾಶ್ರೀ ಪ್ರಶಸ್ತಿಗೆ ಪಾತ್ರರಾದ ಹಿನ್ನೆಲೆಯಲ್ಲಿ ಗಮಕಿ ಕೆ.ವಿ.ಚಂದ್ರಮೌಳಿ ಹಾಗೂ ಜಿಲ್ಲಾಧಿಕಾರಿಕೆ.ಎನ್.ರಮೇಶ್ ದಂಪತಿಯನ್ನು ಗೌರವಿಸಲಾಯಿತು.

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥಜೋಷಿ, ಜಂಟಿ ಕಾರ್ಯದರ್ಶಿ ಎ.ಎನ್.ಗೋಪಾಲಕೃಷ್ಣ, ನಿರ್ದೇಶಕಿ ಎಸ್.ಶಾಂತಕುಮಾರಿ, ಸಾಂಸ್ಕೃತಿಕ ಸಂಘದ ಅಧ್ಯಕ ್ಷಗಿರಿಧರ್ ಯತೀಶ್, ಉಪಾಧ್ಯಕ್ಷ ಆನಂದ್‍ಕುಮಾರ್ ಶೆಟ್ಟಿ, ಕಾರ್ಯದರ್ಶಿ ಉಜ್ವಲ್ ಡಿ.ಪಡುಬಿದ್ರಿ, ಖಜಾಂಚಿ ರಣಜಿತ್ ಸಿಂಗ್, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಶಂಕರ ನಾರಾಯಣ ಭಟ್ ಉಪಸ್ಥಿತರಿದ್ದರು.