ದೆಹಲಿಯಲ್ಲಿ ಭೀಕರ ಅಗ್ನಿ ದುರಂತ ; 27 ಮಂದಿ ಸಜೀವ ದಹನ…

56
firstsuddi

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಬಳಿಯ ವಾಣಿಜ್ಯ ಕಟ್ಟಡವೊಂದರಲ್ಲಿ ನಿನ್ನೆ ಸಂಜೆ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, 27 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಇದೀಗ ಸ್ಥಳದಲ್ಲಿ ಅಗ್ನಿ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುರ್ಘಟನೆಯಲ್ಲಿ ಹಲವರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದ್ದು, ಬೆಂಕಿ ಅವಘಡದ ನಂತರ ನಾಪತ್ತೆಯಾದವರ ಸಂಬಂಧಿಕರು ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಸಾಧ್ಯವಾಗದೆ ಭಯಭೀತರಾಗಿದ್ದಾರೆ.

ದುರಂತ ಸಂಭವಿಸಿದ 3 ನೇ ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಭರದ ರಕ್ಷಣಾ ಕಾರ್ಯಾಚರಣೆ ನಡೆಸಿ ಸುಮಾರು 60-70 ಜನರನ್ನು ರಕ್ಷಿಸಲಾಗಿದೆ, ಇನ್ನೂ ಕೆಲವರು ಒಳಗೆ ಸಿಲುಕಿಕೊಂಡಿದ್ದಾರೆ. ಮೃತರ ವಿವರಗಳು ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ, ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಮತ್ತು ರೂಟರ್ ತಯಾರಿಕಾ ಕಂಪನಿಯ ಕಚೇರಿಯನ್ನು ಹೊಂದಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಂಪನಿಯ ಮಾಲೀಕರಾದ ಹರೀಶ್ ಗೋಯೆಲ್ ಮತ್ತು ವರುಣ್ ಗೋಯೆಲ್ ಅವರನ್ನು ಬಂಧಿಸಲಾಗಿದೆ. ಅಗ್ನಿಶಾಮಕ ಇಲಾಖೆಯಿಂದ ಸುರಕ್ಷತಾ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದಾರೆ. ಈ ಕಟ್ಟಡದ ಮಾಲೀಕರನ್ನು ಮನೀಶ್ ಲಾಕ್ರಾ ಎಂದು ಗುರುತಿಸಲಾಗಿದ್ದು, ಆತ ಪರಾರಿಯಾಗಿದ್ದಾನೆ. ಆದಷ್ಟು ಬೇಗ ಕಟ್ಟಡದ ಮಾಲೀಕನನ್ನು ಬಂಧಿಸಲಾಗುವುದು ಎಂದು ಡಿಸಿಪಿ ಸಮೀರ್ ಶರ್ಮಾ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವಾರು ರಾಜಕಾರಣಿಗಳು ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ, ದೆಹಲಿ ಅಗ್ನಿ ದುರಂತದಲ್ಲಿ ಜೀವಹಾನಿಯಾಗಿರುವುದಕ್ಕೆ ಅತೀವ ಬೇಸರ ತಂದಿದೆ. ದುಃಖಿತ ಕುಟುಂಬಗಳ ಜೊತೆ ನಾವಿದ್ದೇವೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಪ್ರಧಾನಿ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ನೀಡುವುದಾಗಿ ಮೋದಿ ತಿಳಿಸಿದ್ದಾರೆ.