ರಾಜ್ಯದ ಮೂರು ಜಿಲ್ಲೆಗಳ ಕಬ್ಬಿಣದ ಅದಿರು ಸಾಗಿಸಲು ಸುಪ್ರೀಂಕೋರ್ಟ್ ಅನುಮತಿ…

66
firstsuddi

ನವದೆಹಲಿ : ಕರ್ನಾಟಕದ ಚಿತ್ರದುರ್ಗ, ತುಮಕೂರು, ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ರಫ್ತು ಮೇಲಿನ ನಿರ್ಬಂಧವನ್ನು ಸುಪ್ರೀಂಕೋರ್ಟ್ ತೆರವು ಮಾಡಿದ್ದು, ಅದಿರನ್ನು ಸಾಗಿಸಲು ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ್ ಮತ್ತು ನ್ಯಾ.ಕೃಷ್ಣ ಮುರಾರಿ ಹಾಗೂ ನ್ಯಾ.ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಮಿತಿ ಮೀರಿ ಗಣಿಗಾರಿಕೆ ಮಾಡಿದ್ದರಿಂದ ಕರ್ನಾಟಕದಿಂದ ಕಬ್ಬಿಣದ ಅದಿರು ರಫ್ತು ಮಾಡುವುದನ್ನು 2012ರಲ್ಲಿ ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಆದರೆ, ಅದಿರು ಮಾರಾಟ ಮತ್ತು ರಫ್ತಿನ ಮೇಲಿನ ನಿರ್ಬಂಧಗಳನ್ನು ತೆರವು ಮಾಡುವಂತೆ ಗಣಿ ನಿರ್ವಾಹಕರು ಅರ್ಜಿ ಸಲ್ಲಿಸಿದ್ದರು. ಅಂತೆಯೇ, ನ್ಯಾಯಪೀಠವು ಭಾರತ ಸರ್ಕಾರದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅದಿರು ರಫ್ತು ಮಾಡಲು ಅನುಮತಿ ನೀಡಿದೆ.

ಈಗಾಗಲೇ ಅಗೆದಿರುವ ಕಬ್ಬಿಣದ ಅದಿರನ್ನು ಇ-ಹರಾಜು ಮಾಡದೇ ನೇರ ಒಪ್ಪಂದ ಮಾಡಿಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗುತ್ತಿದೆ. ಈಗ ನಿರ್ಬಂಧಗಳನ್ನು ತೆಗೆದುಹಾಕಲಾಗುತ್ತಿದ್ದು, ಮುಂದೆ ಭಾರತ ಸರ್ಕಾರದ ನೀತಿಗಳ ಪ್ರಕಾರ ರಫ್ತು ಮಾಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.