ಓದುವ ಹವ್ಯಾಸ ಸಾಧನೆಗೆ ಅಡಿಗಲ್ಲು : ಉಮೇಶ್.

100
firstsuddi

ಚಿಕ್ಕಮಗಳೂರು : ಓದುವ ಹವ್ಯಾಸ ಸಾಧನೆಗೆ ಅಡಿಗಲ್ಲಾಗುತ್ತದೆ ಎಂದು ಜಿಲ್ಲಾ ಗ್ರಂಥಾಲಯಾಧಿಕಾರಿ ಉಮೇಶ್ ಹೇಳಿದರು.

ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ ತಾಲ್ಲೂಕಿನ ಹಿರೇಗೌಜದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿನ್ನೆ ಏರ್ಪಡಿಸಿದ್ದ ಶಾಲೆಗೆ ಗ್ರಂಥ ದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿರಂತರವಾಗಿ ಓದುವುದರಿಂದ ಜ್ಞಾನಾರ್ಜನೆ ಜೊತೆಗೆ ಸಾಮಾನ್ಯ ಜ್ಞಾನವೂ ಬೆಳೆಯುತ್ತದೆ, ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ, ಸಮಾಜದಲ್ಲಿ ಗೌರವ ತಂದು ಕೊಡುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರತಿಷ್ಠಾನದಿಂದ ಪ್ರತಿ ವರ್ಷ ಶಾಲೆಗಳಿಗೆ ಗ್ರಂಥ ದಾನ ಮಾಡಲಾಗುತ್ತ್ತಿದೆ ಎಂದು ತಿಳಿಸಿದರು.

ಇದೇ ವೇಳೆ 10ನೇ ತರಗತಿಯ ಕನ್ನಡ ಮಾಧ್ಯಮದಲ್ಲಿ 590 ಅಂಕ ಗಳಿಸಿದ ವಿದ್ಯಾರ್ಥಿನಿ ಲಾವಣ್ಯ ಅವರನ್ನು ಸನ್ಮಾನಿಸಲಾಯಿತು, ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಶಾಲೆಯ ಗ್ರಂಥಾಲಯಕ್ಕೆ 55 ಪುಸ್ತಕಗಳನ್ನು ನೀಡಲಾಯಿತು. ಮುಖ್ಯ ಶಿಕ್ಷಕ ಎಸ್.ಆರ್‍ರಾಜೇಗೌಡ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕರಾದ ಚಂದ್ರಶೆಟ್ಟಿ, ಶಿವನಂಜೇಗೌಡ ಉಪಸ್ಥಿತರಿದ್ದರು.