ಜಾನಪದ ಬದುಕಿನ ಅಮೂಲ್ಯವಾದ ಸಂಪತ್ತು : ಎಂ.ಪಿ.ಕುಮಾರಸ್ವಾಮಿ

71
firstsuddi

ಚಿಕ್ಕಮಗಳೂರು : ಜಾನಪದ ನಮ್ಮ ಬದುಕಿನ ಅಮೂಲ್ಯವಾದ ಸಂಪತ್ತು. ಆ ಅಮೃತವನ್ನು ಯಾವುದೇ ಕಾರಣಕ್ಕೂ ನಾವು ಕಳೆದುಕೊಳ್ಳಬಾರದು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಕಿವಿಮಾತು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ತಾಲ್ಲೂಕಿನ ಬೆಳವಾಡಿಯ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಇಂದು ಏರ್ಪಡಿಸಿದ್ದ ಜಾನಪದ ಕಲೆಗಳ ತರಬೇತಿ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಆಧುನಿಕತೆಯಿಂದಾಗಿ ನಮ್ಮ ಜೀವನ ಶೈಲಿ ಇಂದು ಸಂಪೂರ್ಣ ಬದಲಾಗಿದೆ, ಮೈತುಂಬಾ ಬಟ್ಟೆ ಹಾಕಿಕೊಳ್ಳುವವರು ಅನಾಗರೀಕರು, ತುಂಡು ಬಟ್ಟೆ ಧರಿಸುವವರು ನಾಗರೀಕರು ಎಂಬ ಭಾವನೆ ಸಮಾಜದಲ್ಲಿ ಬೆಳೆದಿದೆ ಎಂದು ವಿಷಾದಿಸಿದರು.

ಜಾನಪದ ಗೀತೆಗಳನ್ನು ಸ್ವಯಂ ಹಾಡುವ ಮೂಲಕ ಸಭಿಕರನ್ನು ರಂಜಿಸಿದ ಕುಮಾರಸ್ವಾಮಿ ಜಾನಪದವಿಲ್ಲದೇ ಬದುಕಿಲ್ಲ, ಅದೇ ಭಾರತೀಯರ ಉಸಿರು, ಅದು ನಾಶವಾದರೆ ನಮ್ಮತನ ಸೇರಿದಂತೆ ಎಲ್ಲವೂ ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಜಾನಪದ ತಜ್ಞ ಡಾ|| ಅಪ್ಪಗೆರೆ ತಿಮ್ಮರಾಜು ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಜಾನಪದ ಪ್ರಾಕಾರಗಳು ಬೇರೆ ಜಿಲ್ಲೆಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿವೆ, ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಲೇಬೇಕು ಎಂದು ಒತ್ತಾಯಿಸಿದರು.

ಜಾನಪದವನ್ನು ಉಳಿಸಬೇಕಾದರೆ ರಾಜ್ಯದಲ್ಲಿರುವ ಜಾನಪದ ಕಲಾವಿದರು ಕಣ್ಮರೆಯಾಗುವ ಮೊದಲು ಅವರ ಕಲೆ ಮತ್ತು ಚರಿತ್ರೆಯನ್ನು ದಾಖಲಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಕಣ್ಮರೆಯಾಗುತ್ತಿರುವ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ, ಜಾನಪದವನ್ನು ಪುನರುಜ್ಜೀವನಗೊಳಿಸಲು ಪರಿಷತ್ತಿನಿಂದ ಪ್ರತಿ ತಿಂಗಳಿಗೊಂದು ಹೋಬಳಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಾನಪದ ಸಿರಿ ಪ್ರಶಸ್ತಿ ಪುರಸ್ಕೃತ ಬಿ.ಪಿ.ಪರಮೇಶ್ವರಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು, ಗ್ರಾಮದ ಬಸವೇಶ್ವರ ಭಜನಾ ಮಂಡಳಿಯ ಸದಸ್ಯರನ್ನು ಹಾಗೂ ಜಾನಪದ ಕಲಾವಿದರನ್ನು ಗೌರವಿಸಲಾಯಿತು.

ಸಮಾರಂಭದ ನಡುವೆ ನಡೆದ ಡಾ|| ಅಪ್ಪಗೆರೆ ತಿಮ್ಮರಾಜು ಅವರ ಕಂಚಿನ ಕಂಠದ ಜಾನಪದ ಗೀತೆಗಳ ಗಾಯನ ಕೇಳುಗರ ಮನಗೆದ್ದಿತು ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕುರಿತು ಅಪ್ಪಗೆರೆ ತಿಮ್ಮರಾಜು ಅವರು ಗ್ರಾಮಸ್ಥರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಗ್ರಾಮದ ನೂರಕ್ಕೂ ಹೆಚ್ಚು ಮಹಿಳೆಯರಿಗೆ ಡಾ|| ಅಪ್ಪಗೆರೆ ತಿಮ್ಮರಾಜು ಅವರು ತಾವು ರಚಿಸಿದ ಜಾನಪದ ಗೀತೆಗಳ ಗಾಯನದ ಬಗ್ಗೆ ಹಾಗೂ ಡಾ|| ಮಾಳೇನಹಳ್ಳಿ ಬಸಪ್ಪ ಅವರು ವೀರಗಾಸೆ ನೃತ್ಯದ ಬಗ್ಗೆ ತರಬೇತಿ ನೀಡಿದರು.

ಸಮಾರಂಭಕ್ಕೆ ಮುನ್ನ ಜಾನಪದ ಕಲಾತಂಡಗಳ ನಡುವೆ ಗ್ರಾಮದಲ್ಲಿ ಮೆರವಣಿಗೆ ನಡೆಯಿತು, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಅತ್ತಿಕಟ್ಟೆ ಗುರುನಾಥಗೌಡ ಅಧ್ಯಕ್ಷತೆ ವಹಿಸಿದ್ದರು.

ಜಾನಪದ ಅಕಾಡೆಮಿ ಸದಸ್ಯೆ ಮುಗುಳಿ ಲಕ್ಷ್ಮೀದೇವಮ್ಮ, ಗ್ರಾ.ಪಂ.ಅಧ್ಯಕ್ಷೆ ಹೆಚ್.ಎಸ್.ಕಲ್ಪನಾ, ಡಾ|| ವಿನಾಯಕ ಸಿಂದಿಗೆರೆ, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಂ.ಕೇಶವಮೂರ್ತಿ, ಸಾಹಿತಿ ಡಿ.ಎಂ.ಮಂಜುನಾಥಸ್ವಾಮಿ, ಉಪನ್ಯಾಸಕ ಪ್ರೊ|| ಕೆ.ಎನ್.ಲಕ್ಷ್ಮೀಕಾಂತ್, ವೆಂಕಟೇಶ ನಾಯಕ್, ಬೀರೇಗೌಡ, ಶಂಕರೇಗೌಡ ಉಪಸ್ಥಿತರಿದ್ದರು.