ಬೆಂಗಳೂರು : ಪಠ್ಯ ಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಪರಿಷ್ಕೃತ ಪಠ್ಯ ರದ್ದುಗೊಳಿಸಿ ಹಿಂದಿನ ಪಠ್ಯಕ್ರಮ ಮುಂದುವರಿಸುವಂತೆ ಆಗ್ರಹಿಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿ ಪಕ್ಷದ ಪ್ರಮುಖರು ಭಾಗಿಯಾಗಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ರೋಹಿತ್ ಚಕ್ರತೀರ್ಥ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸರ್ಕಾರ ರೋಹಿತ್ ಚಕ್ರತೀರ್ಥರ ಸಮತಿಯನ್ನ ವಿಸರ್ಜನೆ ಮಾಡಿದೆ. ಸಾರ್ವಜನಿಕ, ಮಠಾಧೀಶರಿಂದ, ಸಾಹಿತಿಗಳಿಂದ, ಶಿಕ್ಷಣ ತಜ್ಞರಿಂದ, ರಾಜಕಾರಣಿಗಳಿಂದ ವಿರೋಧ ವ್ಯಕ್ತವಾಯಿತು. ಅದಕ್ಕಾಗಿ ವಿಸರ್ಜನೆ ಮಾಡಲಾಗಿದೆ. ವಿಸರ್ಜನೆ ಮಾಡಿದ ಮೇಲೆ ಅವರು ಮಾಡಿದ ಪರಿಷ್ಕರಣೆಯನ್ನು ರದ್ದು ಮಾಡಬೇಕು. ಚಕ್ರತೀರ್ಥ ಮಾಡಿದ ಪರಿಷ್ಕರಣೆ ವಜಾ ಮಾಡಬೇಕು. ಮಕ್ಕಳಿಗೆ ಆ ಪಾಠ ಭೋದನೆ ಮಾಡಬಾರದು, ಯಾಕೆಂದರೆ ಅದರಲ್ಲಿ ಇತಿಹಾಸ ತಿರುಚಲಾಗಿದೆ. ಅನೇಕ ದಾರ್ಶನಿಕರ ಇತಿಹಾಸ ತಿರುಚಲಾಗಿದೆ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರ ಸಂವಿಧಾನ ಶಿಲ್ಪಿ ಎಂಬುದನ್ನು ತೆಗೆಯಲಾಗಿದೆ. ಬಸವಣ್ಣ ವೈದಿಕ ಧರ್ಮ ಬಿಟ್ಟು ಬೇರೆ ಧರ್ಮ ಸ್ಥಾಪನೆ ಮಾಡಿದ್ದಾರೆ. ಇತಿಹಾಸ ತಿರುಚಿ ಕೇಸರಿಕರಣ ಮಾಡಿದ್ದಾರೆ. ಬಿಸಿ ನಾಗೇಶ್ ಮೊದಲು ಬದಲಾವಣೆ ಮಾಡಲ್ಲ ಎಂದು ಹೇಳಿದ್ರು. ಸಾಹಿತಿಗಳು, ಸ್ವಾಮೀಜಿಗಳಿಂದ ವಿರೋಧ ವ್ಯಕ್ತವಾದ ಮೇಲೆ ಸ್ವಲ್ಪ ಬದಲಾವಣೆ ಮಾಡ್ತೇವೆ ಎಂದು ಹೇಳಿದ್ರು. ಈಗ ಹೇಳ್ತಾರೆ ಒಂದು ತಿಂಗಳಲ್ಲಿ ಹೊಸ ಪಠ್ಯಕ್ರಮ ಕೊಡ್ತೇವೆ ಎಂದು ಹೇಳಿದ್ದಾರೆ. ಇದರ ಅರ್ಥವೇನು ಎಂದ್ರೆ, ತಿರುಚಿದ್ದು ಒಪ್ಪಿಕೊಂಡ ಹಾಗೆ. ಧಾರವಾಡದಲ್ಲಿ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ, ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆರ್.ಎಸ್.ಎಸ್ ಭಾಷಣ, ಪಠ್ಯಕ್ರಮದಲ್ಲಿ ತಂದು ಮಕ್ಕಳ ಜ್ಞಾನ ಹಾಳ ಮಾಡಬಾರದು, ಹಾಗಾಗಿ ಪರಿಷ್ಕರಣೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಮುಂದುವರೆಸಬೇಕು. ಇಲ್ಲವಾದಲ್ಲಿ ಪಕ್ಷದಲ್ಲಿ ಚರ್ಚೆ ಮಾಡಿ, ಮುಂದಿನ ಹೋರಾಟದ ರೂಪಿಸುತ್ತೇವೆ. ನಾವು ಆರ್ ಎಸ್ ಎಸ್, ಕೇಸರಿಕರಣ ವಿರುದ್ಧ ನಾವಿದ್ದೇವೆ. ಮಕ್ಕಳ ಮನಸ್ಸಿಗೆ ವಿಷ ಉಣಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.










