ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪತ್ರ ಬರೆದಿದ್ದು, ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ಹಿಂಪಡೆದು ಹಿಂದೆ ಇದ್ದ ಪಠ್ಯಪುಸ್ತಕಗಳನ್ನೇ ಮುಂದುವರೆಸಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಪಠ್ಯಪುಸ್ತಕಗಳ ಮರು ಪರಿಷ್ಕರಣೆಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ 2022ರ ಜೂನ್ 18 ರಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನಾನು ಭಾಗವಹಿಸಿದ್ದಾಗ, ನನ್ನ ಮೂಲಕ ತಮಗೆ ಮನವರಿಕೆ ಮಾಡಲು ನೀಡಿದ ಮನವಿ ಪತ್ರವನ್ನು ಇದಕ್ಕೆ ಲಗತ್ತಿಸಿರುತ್ತೇನೆ. ಪಠ್ಯಪುಸ್ತಕಗಳ ಮರು ಪರಿಷ್ಕರಣೆಗೆ ನೇಮಿಸಿದ ಸಮಿತಿಯ ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿರುತ್ತಾರೆ. ನಾಡಗೀತೆಯನ್ನು ಅಸಭ್ಯವಾಗಿ ತಿರುಚಿದವರಿಗೆ ಬಹುಮಾನ ಕುವೆಂಪು ನೀಡುತ್ತೇನೆಂದು ಹೇಳಿದ್ದು ಕೂಡ ಅವರಿಗೆ ಮಾಡಿದ ದೊಡ್ಡ ಅವಮಾನವೇ ಆಗಿದೆ. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದು, ನಾಡ ಅಸ್ಮಿತೆಗೆ ಮಾಡಿದ ಅವಮಾನವಾಗಿದೆ.
ಜೊತೆಗೆ ಡಾ.ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂಥ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು. ಇನ್ನು ಮರು ಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳಂತೂ ಅಸಂಖ್ಯಾತ. ಸಮಾಜ ವಿಜ್ಞಾನ ಪಠ್ಯಪುಸ್ತಕದ ಏಕೀಕರಣ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರ ಚಳವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ.
ಬಸವಣ್ಣನವರ ಚಳವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ. ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಶ್ರೀಗಳ ಸೇವೆಯ ವಿವರಗಳನ್ನು ತೆಗೆಯಲಾಗಿದೆ. ಅಂಬೇಡ್ಕರ್ ಅವರಿಗೆ ‘ಸಂವಿಧಾನ ಶಿಲ್ಪಿ’ ಎಂದಿದ್ದ ವಿಶೇಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫ ಅವರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೇ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ. ಡಾ.ಅಂಬೇಡ್ಕರ್ ಮತ್ತು ಕುವೆಂಪು ಅವರು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜಾತ್ಯತೀತತೆ ಮತ್ತು ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಮನ ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ.
ಪಠ್ಯಪುಸ್ತಕಗಳಲ್ಲಿನ ಅಸಂಖ್ಯಾತ ದೋಷ ಮತ್ತು ಅನ್ಯಾಯಗಳನ್ನು ಕೇವಲ ತಮ್ಮೇಲೆ ಅಥವಾ ಪ್ರತ್ಯೇಕ ಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪುನರ್ ಪರಿಷ್ಕರಣೆಯ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು, ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪರವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೇ ಈ ವರ್ಷ ಮುಂದುವರೆಸುವುದು ಸೂಕ್ತವೆಂದು ನಾನು ಕೂಡ ಅಭಿಪ್ರಾಯ ಪಡುತ್ತೇನೆ. ಈಗ ತಮಗೆ ಕಳುಹಿಸುತ್ತಿರುವ ವಿಶ್ವಮಾನವ ಕುವೆಂಪು ಹೋರಾಟ ಸಮಿತಿಯ ಹಕ್ಕೊತ್ತಾಯ ಪತ್ರದ ಅಂಶಗಳನ್ನು ನಾನು ಕೂಡ ಬೆಂಬಲಿಸುತ್ತಾ, ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಶಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.










