ಬೆಂಗಳೂರು : ಇತ್ತೀಚೆಗೆ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿದ್ದವು. ಇದೀಗ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಸ್ವತಃ ಪವಿತ್ರಾ ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ. ನಾನು ಮತ್ತು ಸುಚೇಂದ್ರ ಪ್ರಸಾದ್ ಒಟ್ಟಿಗೆ ಹನ್ನೊಂದು ವರ್ಷ ಇದ್ದದ್ದು ನಿಜ. ಆದರೆ, ಅವರ ಜೊತೆ ನನ್ನ ಮದುವೆ ಆಗಿಲ್ಲ. ಮದುವೆ ಆಗದೇ ಯಾಕೆ 11 ವರ್ಷಗಳ ಕಾಲ ಜೊತೆಗೆ ಇದ್ದವು ಎನ್ನುವುದನ್ನು ನಾನು ಹೇಳಲಾರೆ. ಅದನ್ನು ಸುಚೇಂದ್ರ ಪ್ರಸಾದ್ ಅವರೇ ಹೇಳಬೇಕು. ಆದರೂ, ಅವರನ್ನು ನಾನು ಇವತ್ತಿಗೂ ಗೌರವಿಸುತ್ತೇನೆ. ನಮ್ಮ ಮದುವೆ ವಿಚಾರವನ್ನು ಇಷ್ಟೇ ಹೇಳುವುದಕ್ಕೆ ಸಾಧ್ಯ. 2017ರಿಂದಲೇ ನಾನು ಅವರಿಂದ ದೂರವಾಗಿ, ಬೇರೆ ಫ್ಲ್ಯಾಟ್ ನಲ್ಲಿ ಬದುಕುತ್ತಿದ್ದೇನೆ ಎಂದಿದ್ದಾರೆ ಪವಿತ್ರಾ ಲೋಕೇಶ್.

ತೆಲುಗು ನಟ ನರೇಶ್ ಅವರನ್ನು ಪವಿತ್ರಾ ಲೋಕೇಶ್ ಎರಡು ವರ್ಷಗಳ ಹಿಂದೆಯೇ ಮದುವೆ ಆಗಿದ್ದಾರೆ ಎಂದು ತೆಲುಗು ಮಾಧ್ಯಮಗಳು ಸುದ್ದಿ ಮಾಡಿದ್ದವು. ಈ ಕುರಿತು ನರೇಶ್ ಅವರ ಪತ್ನಿ ರಮ್ಯಾ ಕೂಡ ಹೇಳಿಕೆ ನೀಡಿ, ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಪವಿತ್ರಾ ಲೋಕೇಶ್ ಮಾತನಾಡಿದ್ದಾರೆ. ನಾನು ಮತ್ತು ನರೇಶ್ ಅವರು ಪರಿಚಯವಾಗಿದ್ದು 4 ವರ್ಷಗಳ ಹಿಂದೆ. ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ನನ್ನ ಜೊತೆ ಹಂಚಿಕೊಳ್ಳುತ್ತಿದ್ದರು. ನಾನೂ ಹಂಚಿಕೊಳ್ಳುತ್ತಿದೆ. ಅಷ್ಟರ ಮಟ್ಟಿಗೆ ನಮ್ಮಲ್ಲಿ ಆತ್ಮಿಯತೆ ಬೆಳೆಯಿತು. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಅಂದರೆ, ಒಟ್ಟಿಗೆ ಓಡಾಡುವುದು ಸಹಜ. ಅದರ ಹೊರತಾಗಿ ಏನೂ ಇಲ್ಲ ಎಂದಿದ್ದಾರೆ.
ಇನ್ನೂ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಹಿಂದೆ ಹೋಗಿದ್ದು ಕೇವಲ ದುಡ್ಡಿಗಾಗಿ ಎಂದು ಸುಚೇಂದ್ರ ಪ್ರಸಾದ್ ಹೇಳಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತು ಪವಿತ್ರಾ ಲೋಕೇಶ್ ಉತ್ತರಿಸಿದ್ದಾರೆ. ಸುಚೇಂದ್ರ ಪ್ರಸಾದ್ ಅವರು ಏನು ಮಾತನಾಡಿದ್ದಾರೆ ಅಂತ ನನಗಂತೂ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎನ್ನಲಾದ ಆಡಿಯೋದಲ್ಲಿ ನಾನು ದುಡ್ಡಿಗಾಗಿ ನರೇಶ್ ಅವರ ಜೊತೆ ಹೋಗಿದ್ದೇನೆ ಅಂತ ಅವರು ಹೇಳಿದ್ದರೆ, ನಾನು ಸುಚೇಂದ್ರ ಪ್ರಸಾದ್ ಅವರನ್ನು ಒಪ್ಪಿ ಹೋದಾಗ ಅವರ ಬಳಿ ಏನಿತ್ತು ಎನ್ನುವುದನ್ನು ಯೋಚಿಸಲಿ ಎಂದಿದ್ದಾರೆ ಪವಿತ್ರಾ ಲೋಕೇಶ್.










